ADVERTISEMENT

ದೌರ್ಜನ್ಯ ತಡೆಗೆ ಶಿಕ್ಷಣವೊಂದೇ ಅಸ್ತ್ರ: ಎಸ್‌.ವಿ.ಸಂಕನೂರ

ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಎಸ್‌.ವಿ.ಸಂಕನೂರ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 8:35 IST
Last Updated 21 ಅಕ್ಟೋಬರ್ 2021, 8:35 IST
ಗದಗ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಿಎ ಪದವಿಯಲ್ಲಿ ಎರಡನೇ ರ‍್ಯಾಂಕ್‌ ಪಡೆದ ಕೆಎಸ್‍ಎಸ್ ಕಾಲೇಜಿನ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿನಿ ಪ್ರೇಮಾ ಹಂದರಾಳ ಅವರನ್ನು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಗೌರವಿಸಿದರು
ಗದಗ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಿಎ ಪದವಿಯಲ್ಲಿ ಎರಡನೇ ರ‍್ಯಾಂಕ್‌ ಪಡೆದ ಕೆಎಸ್‍ಎಸ್ ಕಾಲೇಜಿನ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿನಿ ಪ್ರೇಮಾ ಹಂದರಾಳ ಅವರನ್ನು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಗೌರವಿಸಿದರು   

ಗದಗ: ‘ಸೂರ್ಯ, ಚಂದ್ರರು ಇರುವವರೆಗೂ ರಾಮಾಯಣ ಮಹಾಕಾವ್ಯ ಜಗತ್ತಿನ ಅಮರ ಕಾವ್ಯವಾಗಿ ನಿಲ್ಲಲಿದೆ. ಇದನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಕೂಡ ಅಮರ ಕವಿಯಾಗಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ವಾಲ್ಮೀಕಿ ಇಲ್ಲದೇ ರಾಮಾಯಣ ಇಲ್ಲ; ರಾಮಾಯಣ ಇಲ್ಲದೇ ವಾಲ್ಮೀಕಿ ಇಲ್ಲ. ಈ ಸಮೀಕರಣವನ್ನು ದೂರಮಾಡಿ ವಾಲ್ಮೀಕಿಯನ್ನಾಗಲೀ, ರಾಮಾಯಣವನ್ನಾಗಲೀ ನೋಡಲು ಸಾಧ್ಯವಿಲ್ಲ. ವಾಲ್ಮೀಕಿಯವರ ವಿಚಾರಧಾರೆಗಳನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಬಾರದು. ಅವರ ಮಹತ್ವದ ವಿಚಾರಗಳು ಇಂದಿಗೂ ಪ್ರಚಲಿತವಾಗಿದ್ದು, ಅವುಗಳನ್ನು ಅನುಸರಿಸುವ ಮೂಲಕ ಕವಿಗೆ ಗೌರವ ಸಲ್ಲಿಸಬೇಕು’ ಎಂದರು.

ADVERTISEMENT

‘ದೌರ್ಜನ್ಯ ತಡೆಗೆ ಶಿಕ್ಷಣವೊಂದೇ ಅಸ್ತ್ರ. ಸರಿಯಾದ ನೆಲೆಯಲ್ಲಿ ಶಿಕ್ಷಣ ಪಡೆದುಕೊಂಡು ಮುಂದೆ ಸಾಗಬೇಕು. ಸರ್ಕಾರ ಒದಗಿಸಿರುವ ವಿವಿಧ ಯೋಜನೆಗಳನ್ನು ಸಮಾಜದ ಕೊನೆಯ ವ್ಯಕ್ತಿಯೂಪಡೆಯಬೇಕಾದರೆ ಶಿಕ್ಷಣವೇ ಬುನಾದಿ’ ಎಂದು ಅವರು ಹೇಳಿದರು.

ಖಾನಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಸಹಾಯಕ ಪ್ರಾಧ್ಯಾಪಕ ಎಫ್.ಬಿ.ನಾಯ್ಕರ್ ಮಾತನಾಡಿ, ‘ಕೊಟ್ಟ ಮಾತಿನಂತೆ ವಚನ ಪಾಲಿಸುವ ನೀತಿಗೆ ರಾಮಾಯಣ ಮಹಾಕಾವ್ಯ ಪ್ರೇರಕವಾಗಿದೆ. ಮನುಷ್ಯನು ಯೌವನ, ಅಧಿಕಾರ, ಹಣ ಬಂದಾಗ ಏಕಚಿತ್ತದಿಂದ ಇರಬೇಕು. ಹಣ, ಅತಿಯಾಸೆ, ವ್ಯಾಮೋಹಗಳು ಅಡ್ಡದಾರಿ ಹಿಡಿಸುತ್ತವೆ. ಹಾಗಾಗಿ ಅರಿತು ನಡೆಯುವುದನ್ನು ರಾಮಾಯಣದಿಂದ ಕಲಿಯಬೇಕು’ ಎಂದು ಸಲಹೆ ನೀಡಿದರು.

ವಾಲ್ಮೀಕಿ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಜಿಲ್ಲೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.

ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಸಿಇಒ ಭರತ್ ಎಸ್., ಎಸ್‌ಪಿ ಯತೀಶ್ ಎನ್., ಎಡಿಸಿ ಸತೀಶ್ ಕುಮಾರ್‌ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ವಾಲ್ಮೀಕಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸಣ್ಣ ಬೆಳದಡಿ, ಜ್ಯೋತಿ ಇರಾಳ
ಇದ್ದರು.

‘ಮೌಲ್ಯಗಳಿಗೆ ಮಹತ್ವ’

‘ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವು ಮೌಲ್ಯಗಳ ಪ್ರತಿಪಾದನೆ ಮತ್ತು ಭಾರತೀಯರ ಜೀವನ ಚರಿತ್ರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ’ ಎಂದು ಬೆಂಗಳೂರಿನ ತಾಂತ್ರಿಕ ಮಂಡಳಿಯ ನಿವೃತ್ತ ನಿರ್ದೇಶಕ ಹನುಮಂತಪ್ಪ ತಳವಾರ ಹೇಳಿದರು.

‘ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ, ಅಥಿತಿ ದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.