ಗದಗ: ಶುಕ್ರವಾರ ನಡೆಯುವ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆಗಳಲ್ಲಿ ಗುರುವಾರ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಕಾರಣಕ್ಕಾಗಿ ಹೂವು ಹಣ್ಣುಗಳ ಬೆಲೆ ಗಗನಕ್ಕೇರಿದ್ದವು.
ನಗರದ ನಾಮಜೋಷಿ ರಸ್ತೆಯಲ್ಲಿರುವ ಹೂವು ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ಇಡೀ ದಿನ ಜನದಟ್ಟಣೆ ಕಂಡುಬಂತು.
ಮಾಮೂಲಿ ದಿನಗಳಲ್ಲಿ ₹20– ₹30ಕ್ಕೆ ಮಾರಾಟವಾಗುತ್ತಿದ್ದ ಸೇವಂತಿಗೆ ದರ ಹಬ್ಬದ ಕಾರಣಕ್ಕೆ ದ್ವಿಗುಣಗೊಂಡಿತ್ತು. ಹೂವಿನ ವ್ಯಾಪಾರಿಗಳು ಒಂದು ಮಾರು ಸೇವಂತಿಗೆಯನ್ನು ₹60ಕ್ಕೆ ಮಾರಾಟ ಮಾಡಿದರು. ಚೆಂಡು ಹೂವು ಮಾರು ₹70– ₹80ಕ್ಕೆ ಮಾರಾಟವಾಯಿತು. ಮಲ್ಲಿಗೆ ₹120, ಕನಕಾಂಬರ ₹100ಕ್ಕೆ ಏರಿಕೆಯಾಗಿತ್ತು. ಬಿಡಿಹೂವುಗಳ ದರವೂ ಗಗನಮುಖಿಯಾಗಿತ್ತು.
ಅದೇ ರೀತಿಯಾಗಿ, ಹಣ್ಣುಗಳ ದರ ಕೂಡ ಗ್ರಾಹಕರ ಜೇಬಿಗೆ ಭಾರವಾಗಿತ್ತು. ಕೆ.ಜಿ. ಸೇಬು ₹200–₹300, ದಾಳಿಂಬೆ ₹200, ಮೂಸಂಬಿ ₹50, ಏಲಕ್ಕಿ ಬಾಳೆ ₹100– ₹125ಕ್ಕೆ ಮಾರಾಟವಾಯಿತು. ಪೂಜೆಗೆ ಇಡುವ ಬಾಳೆಕಂದು ಜೋಡಿಗೆ ₹60ರಂತೆ ಮಾರಾಟವಾದವು. ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ಹಣ್ಣುಗಳು ಅಗತ್ಯವಾಗಿ ಬೇಕಿರುವುದರಿಂದ ಬೆಲೆ ಏರಿಕೆ ನಡುವೆಯೂ ಗ್ರಾಹಕರು ಖರೀದಿಸಿರು.
ಹಬ್ಬದ ಖರೀದಿಗೆ ಸಾವಿರಾರು ಜನರು ಬಂದಿದ್ದ ಕಾರಣ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ಮಾರುಕಟ್ಟೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲವಾದ್ದರಿಂದ ಬೈಕು, ಟಂಟಂಗಳು ಅಡ್ಡಾದಿಡ್ಡಿಯಾಗಿ ನಿಂತಿದ್ದವು. ಇದರಿಂದಾಗಿ ಸಂಚಾರ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿತ್ತು. ಕಾರುಗಳು ಕೂಡ ಅದೇ ಮಾರ್ಗದಲ್ಲಿ ಸಂಚರಿಸಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ಮಾರುಕಟ್ಟೆ ಪ್ರದೇಶದಲ್ಲಿ ಸುಗಮ ಸಂಚಾರ ವ್ಯವಸ್ಥೆ ಮಾಡಲು ಪೊಲೀಸರು ಹೆಣಗಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.