ADVERTISEMENT

ಶಾಂತಿ ಕದಡುವ ವಾತಾವರಣ; ಸರ್ಕಾರವೇ ನೇರ ಹೊಣೆ: ಮೊಯಿಲಿ

​ಪ್ರಜಾವಾಣಿ ವಾರ್ತೆ
Published 11 ಮೇ 2022, 2:50 IST
Last Updated 11 ಮೇ 2022, 2:50 IST

ಗದಗ: ‘ದೇಶದಲ್ಲಿರುವ ಎಲ್ಲ ವರ್ಗ, ಧರ್ಮದ ಪ್ರಜೆಗಳಿಗೆ ಸಂವಿಧಾನದಲ್ಲಿ ರಕ್ಷಣೆ ಇದೆ. ಅವರವರ ಧರ್ಮ, ಮತ ಪಾಲಿಸಲು ಅವಕಾಶವಿದೆ. ಆದರೆ, ಇವತ್ತು ಆ ವಾತಾವರಣವನ್ನು ಕದಡುವ ಕೆಲಸವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಇದಕ್ಕೆ ಸರ್ಕಾರವೇ ನೇರ ಕಾರಣ’ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ದೂರಿದರು.

ಅವರು ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿ, ‘ಸಮಾಜದಲ್ಲಿ ನೆಮ್ಮದಿ, ಸಮನ್ವಯತೆ ಬೇಕು. ನೇರವಾಗಿ ಅಧಿಕಾರ ಮಾಡುವ ಪಕ್ಷಗಳೇ ಶಾಂತಿ ಕದಡಲು ಹೋದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ’ ಎಂದರು.

ಸಚಿವ ಅಶ್ವತ್ಥ್‌ ನಾರಾಯಣ ಹಾಗೂ ಎಂ.ಬಿ ಪಾಟೀಲ ಭೇಟಿ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಭೇಟಿಗೆ ಯಾವುದೇ ಅರ್ಥ ಕಲ್ಪಿಸುವುದಿಲ್ಲ. ರಾಜಕಾರಣಿಗಳು, ಮಂತ್ರಿಗಳು, ಶಾಸಕರು ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ಸಚಿವ ಅಶ್ವತ್ಥ್‌ ನಾರಾಯಣ ಅವರ ಮೇಲೆ ಆರೋಪ ಬಂದರೆ ಅವರನ್ನು ವಿಚಾರಣೆಗೆ ಒಳಪಡಿಸಬೇಕು, ಸಿಎಂ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಲಂಚಾವತಾರ ತಾಂಡವಾಡುತ್ತಿದೆ. ನೇಮಕಾತಿ ರದ್ದು ಮಾಡಿದ್ದೇ ಲಂಚಾವತಾರ ಇದೇ ಅನ್ನುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಿಶೇಷ ಅರ್ಥ ಬೇಡ: ಎಚ್ಕೆಪಿ

ಗದಗ: ಸಚಿವ ಅಶ್ವತ್ಥ್‌ ನಾರಾಯಣ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ನೇಹಿತರು. ಅವರ ಭೇಟಿಯಲ್ಲಿ ವಿಶೇಷವೇನೂ ಇರದು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಶ್ವತ್ಥ್‌ ನಾರಾಯಣ ನನ್ನ ಬಳಿ ರಕ್ಷಣೆ ಕೇಳಿ ಬಂದಿದ್ದಾರೆ ಅಂತ ಎಂ.ಬಿ.ಪಾಟೀಲರು ಆಪಾದನೆ ಮಾಡಿದರೆ ಅದು ಚರ್ಚೆ ಆಗುತ್ತೆ. ಇಲ್ಲದಿದ್ದರೆ ಅವರ ಭೇಟಿ ಸಹಜ ಇರಬಹುದು, ಸ್ನೇಹ ಇರಬಹುದು ಅಥವಾ ಸೌಜನ್ಯ ಭೇಟಿ ಇರಬಹುದು’ ಎಂದು ವ್ಯಾಖ್ಯಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.