ಗದಗ: ‘ಮಂಗಳೂರಿನವರ ಹೊಟ್ಟೆಗೆ ಬಟ್ಟೆಗೆ ಕಾಂಗ್ರೆಸ್ ಬೇಕು; ವೋಟ್ ಹಾಕೋಕೆ ಬೇರೆ ಪಕ್ಷ ಬೇಕು’ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ದಕ್ಷಿಣ ಕನ್ನಡದ ಜನತೆಯನ್ನು ಅಪಮಾನಿಸಿದ್ದಾರೆ’ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಆರೋಪಿಸಿದ್ದಾರೆ.
‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುವಾಗ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ಮತದಾರರ ಕುರಿತು ಅಪಮಾನ ಮಾಡಿದ್ದಾರೆ. ಮಂಗಳೂರಿನ ಜನ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಹಾಕಿದ್ದನ್ನು ವ್ಯಂಗ್ಯ ಮಾಡಿರುವ ಅವರು, ತಮ್ಮ ಸಣ್ಣತನ ಪ್ರದರ್ಶಿಸಿದ್ದಾರೆ’ ಎಂದು ಟೀಕಿಸಿದ್ದಾರೆ.
‘ಗ್ಯಾರಂಟಿಗಳಿಗೆ ಹಣ ತೆರಿಗೆದಾರರ ದುಡ್ಡಿನಿಂದ ಹೋಗುತ್ತಿದೆಯೇ ಹೊರತು ಕಾಂಗ್ರೆಸ್‌ನದ್ದಲ್ಲ. ಗ್ಯಾರಂಟಿಗಳ ಹೆಸರು ಹೇಳಿಕೊಂಡು ವೋಟ್ ಕೇಳುವಾಗ ಕಾಕಾ, ಮಾಮ, ಅಪ್ಪ, ಅವ್ವ ಎಲ್ಲರಿಗೂ ಉಚಿತ ಅಂತ ಹೇಳಿದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಮತದಾರರನ್ನು ಅವಮಾನಿಸುತ್ತಿರುವ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರ ನಡೆ ಖಂಡನೀಯ’ ಎಂದು ಹೇಳಿದ್ದಾರೆ.
‘ತೆರಿಗೆದಾರರ ಹಣ ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇದು ಮನವರಿಕೆ ಆಗಬೇಕು. ಗ್ಯಾರಂಟಿಗಳಿಗೆ ಸಂದಾಯವಾಗುತ್ತಿರುವ ಹಣ ಕಾಂಗ್ರೆಸ್ ಪಕ್ಷದ್ದಲ್ಲ; ಇದು ಡಿ.ಕೆ.ಶಿವಕುಮಾರ್ ಅವರ ಅರಿವಿಗೂ ಬರಬೇಕು’ ಎಂದು ಹೇಳಿದ್ದಾರೆ.
‘ಸಂಖ್ಯಾ ಬಲ ಇದೆ ಎಂಬ ಅಧಿಕಾರದ ಮದದಲ್ಲಿ ಮತದಾರರನ್ನು ಅಪಮಾನಿಸಿದರೆ ಮುಂದೆ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.