ಗದಗ: ಇಲ್ಲಿನ ತಹಶೀಲ್ದಾರ್ ಕಚೇರಿ ಒಳಗೆ ಯುವಕನೊಬ್ಬನಿಗೆ ಹಲ್ಲೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಉಪ ತಹಶೀಲ್ದಾರ್ ಡಿ.ಟಿ.ವಾಲ್ಮೀಕಿ ಅವರನ್ನು ಅಮಾನತು ಮಾಡಲಾಗಿದೆ.
ಅಕ್ಷಯ್ ಬೊಳ್ಳೊಳ್ಳಿ ಎಂಬಾತನ ಗೆಳೆಯನ ಬೈಕ್‌ಗೆ ಉಪ ತಹಶೀಲ್ದಾರ್ ಅವರ ಪರಿಚಯಸ್ಥನ ಕಾರು ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿತ್ತು. ಬಳಿಕ ಅಕ್ಷಯ್, ತಹಶೀಲ್ದಾರ್ ಕಚೇರಿ ಒಳಕ್ಕೆ ಹೋಗಿ ಪ್ರಶ್ನಿಸಿದಾಗ ಕೆರಳಿದ ಉಪ ತಹಶೀಲ್ದಾರ್ ಹಾಗೂ ಅವರ ತಂಡ ಯುವಕನ ಮೇಲೆ ಹಲ್ಲೆ ನಡೆಸಿದೆ. ಈ ಘಟನೆಯಲ್ಲಿ ವಾಲ್ಮೀಕಿ ಜತೆಗೆ ಕಾಂಗ್ರೆಸ್ ಮುಖಂಡರೊಬ್ಬರೂ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.
‘ವಿಡಿಯೊದಲ್ಲಿರುವಂತೆ ನಾನು ಚೇರ್ ಎತ್ತಿಕೊಂಡು ಯುವಕನಿಗೆ ಹೊಡೆಯಲು ಹೋಗಿಲ್ಲ. ಕಚೇರಿಯೊಳಗೆ ಜಗಳ ಮಾಡಿಕೊಳ್ಳಬೇಡಿ. ಹೊರಕ್ಕೆ ಹೋಗಿ ಎಂದು ಹೇಳಿದ್ದೇನೆ’ ಎಂದು ಉಪ ತಹಶೀಲ್ದಾರ್ ತಿಳಿಸಿದ್ದಾರೆ.
‘ಕಚೇರಿಯೊಳಗೆ ನಡೆದಿರುವ ಘಟನೆ ಸಂಬಂಧ ಕಾರಣ ಕೇಳಿ ಉಪ ತಹಶೀಲ್ದಾರ್‌ಗೆ ನೋಟಿಸ್ ಕೊಡಲಾಗಿದೆ. ಜತೆಗೆ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ’ ಎಂದು ಗದಗ ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.