ಗದಗ: ‘ಜಿಲ್ಲೆಯಲ್ಲಿ ಪವನ ವಿದ್ಯುತ್ ಕಂಬ ಸ್ಥಾಪಿಸುವ ಕಂಪನಿಗಳು ಜಮೀನು ವಿಚಾರದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದು, ಅವುಗಳಿಗೆ ಲಗಾಮು ಹಾಕುವ ಕೆಲಸವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಪಂ. ಪುಟ್ಟರಾಜ ರೈತ ಸಂಘದ ಅಧ್ಯಕ್ಷ ಎಂ.ಪಿ. ಮುಳಗುಂದ ಒತ್ತಾಯಿಸಿದರು.
‘ರೈತರಿಂದ ಜಮೀನು ಗುತ್ತಿಗೆ ಪಡೆಯುವ ಸಂದರ್ಭದಲ್ಲಿ ಎಲ್ಲ ದಾಖಲೆಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಸಿದ್ಧಪಡಿಸಿರುತ್ತಾರೆ. ಇದರಿಂದಾಗಿ, ಕಂಪನಿಯವರು ಅದರಲ್ಲಿ ಏನೇನು ಬರೆದುಕೊಂಡಿರುತ್ತಾರೆ, ಷರತ್ತುಗಳೇನು ಎಂಬುದರ ಸ್ಪಷ್ಟ ತಿಳಿವಳಿಕೆ ರೈತರಿಗೆ ಸಿಗುವುದಿಲ್ಲ. ಇದನ್ನಿಟ್ಟುಕೊಂಡೇ ಪವನ ವಿದ್ಯುತ್ ಕಂಪನಿಯವರು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಲೀಸ್ ಕೊಟ್ಟ ಮೇಲೆ ಪವನ ವಿದ್ಯುತ್ ಕಂಬದ ಕಾಮಗಾರಿ ಮುಗಿದ ಬಳಿಕ ಉಳಿದ ಜಮೀನಿನಲ್ಲಿ ರೈತ ಬೆಳೆ ಬೆಳೆಯಬಹುದಾದರೂ ಒಂದು ವೇಳೆ ಪ್ರಕೃತಿ ವಿಕೋಪ ಅಥವಾ ಅನಾವೃಷ್ಟಿಗೆ ತುತ್ತಾದಾಗ ಬೆಳೆವಿಮೆ ವ್ಯಾಪ್ತಿಗೂ ಅದು ಒಳಪಡುವುದಿಲ್ಲ ಎನ್ನಲಾಗಿದೆ. ಕೂಡಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಮತ್ತು ರೈತರ ಹಿತ ಕಾಪಾಡಲು ಜಿಲ್ಲಾಡಳಿತ ಮುಂದಾಗಬೇಕು’ ಎಂದು ಒತ್ತಾಯಿಸಿದರು.
ರೈತ ಮುಖಂಡ ಅಶೋಕ ಬಸೆಟ್ಟಿ ಮಾತನಾಡಿ, ‘ಪವನ ವಿದ್ಯುತ್ ಕಂಬ ಹಾಕಲು ಅನುಮತಿ ನೀಡುವ ರೈತರ ಬಳಿ ಒಂದು ಎಕರೆ ಖರೀದಿಸಿ, ಸುತ್ತಲಿನ ಐದು ಎಕರೆಯನ್ನು ಲೀಸ್‍ಗೆ ಪಡೆಯುತ್ತಿದ್ದಾರೆ. ಆದರೆ, ಈಚೆಗೆ ರೈತರ ಗಮನಕ್ಕೂ ತಾರದೇ ಖರೀದಿ ಮಾಡಿಕೊಂಡ ಒಂದು ಎಕರೆಯೂ ಸೇರಿ ಲೀಸ್‍ಗೆ ಪಡೆದ ಐದು ಎಕರೆಯನ್ನೂ ‘ಭೂ ಪರಿವರ್ತನೆ’ ಮಾಡಲು ಮುಂದಾಗುತ್ತಿದ್ದಾರೆ. ಮತ್ತೆ ಕೆಲವೆಡೆ ಒಂದು ಕಂಬ ಹಾಕಲು ಐದಾರು ಎಕರೆ ಭೂಮಿಯನ್ನು ಖರೀದಿಸುತ್ತಿದ್ದು, ಇದರ ಹಿಂದೆ ಏಜೆಂಟರು ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ’ ಎಂದು ಆರೋಪ ಮಾಡಿದರು.
‘ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ಕಂಪನಿಗಳಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡಬೇಕು. ತಪ್ಪಿದರೆ ಭವಿಷ್ಯದಲ್ಲಿ ರೈತರ ಫಲವತ್ತಾದ ಭೂಮಿ ಹಾಳಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಶಂಭುನಾಥ ಅಂಗಡಿ, ಚನ್ನಪ್ಪ ಬಣಪ್ಪನವರ, ರಘುನಾಥರಡ್ಡಿ ಹುಚ್ಚಣ್ಣವರ, ಮಂಜುನಾಥ ಗುಡದೂರ, ಫಕ್ಕೀರಯ್ಯ ಕಣವಿ, ಸುಭಾಷರಡ್ಡಿ ಭೂಮಕ್ಕನವರ, ಕವಿತಾ ಗುಡದೂರ, ಕವಿತಾ ಮಬನೂರಕರ ಇದ್ದರು.
ಪವನ ವಿದ್ಯುತ್ ಕಂಬ ಹಾಕಲು ಅನುಮತಿಸುವ ರೈತರ ಬಳಿ ಮಾಡಿಕೊಳ್ಳುವ ಒಪ್ಪಂದವು ಇಂಗ್ಲಿಷ್‌ನಲ್ಲಿದ್ದು ಕನ್ನಡದಲ್ಲಿ ಇರುವಂತೆ ಜಿಲ್ಲಾಡಳಿತ ತಾಕೀತು ಮಾಡಬೇಕುಎಂ.ಪಿ. ಮುಳಗುಂದ ಕರ್ನಾಟಕ ರಾಜ್ಯ ಪಂ. ಪುಟ್ಟರಾಜ ರೈತ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.