ಗಜೇಂದ್ರಗಡ(ಗದಗ): ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಪಟ್ಟಣದ ಚೋಳಿನವರ ಓಣಿಯ ನಿವಾಸಿ ಪ್ರೇಮಾ ಶರಣಪ್ಪ ಚೋಳಿನ (53) ಮೃತರು.
ಪ್ರೇಮಾ ಚೋಳಿನ ಭಾನುವಾರ ಬೆಳಗಿನ ಜಾವ ಮನೆ ಹತ್ತಿರ ಹೂ ಕೀಳುತ್ತಿದ್ದಾಗ ಬೀದಿ ನಾಯಿಗಳು ಸಾಮೂಹಿಕವಾಗಿ ದಾಳಿ ಮಾಡಿ, ನೆಲಕ್ಕೆ ಬೀಳಿಸಿ ಕಚ್ಚಿವೆ.
ಬೀದಿ ನಾಯಿಗಳ ದಾಳಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪ್ರೇಮಾ ಚೋಳಿನ ಅವರನ್ನು ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆಸ್ಪತ್ರೆ ಮುಂದಿನ ಹೆದ್ದಾರಿ ತಡೆದು ಪ್ರತಿಭಟನೆ:
ಬೀದಿ ನಾಯಿಗಳ ದಾಳಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪ್ರೇಮಾ ಚೋಳಿನ ಚಿಕಿತ್ಸೆ ಫಲಿಸದೆ ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರ ಜೊತೆಗೆ ಸ್ಥಳೀಯರು ಆಸ್ಪತ್ರೆ ಮುಂದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹವನ್ನು ಇಟ್ಟು ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸ್ಥಳೀಯ ಪುರಸಭೆ ವಿರುದ್ದ ಆಕ್ರೋಶ ಹೊರ ಹಾಕಿದರು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ (ಯು.ಡಿ) ಪ್ರಕರಣ ದಾಖಲಾಗಿದೆ.
ಪಟ್ಟಣದ ವಿವಿಧ ಓಣಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗುಂಪು ಗುಂಪಾಗಿ ಸಂಚರಿಸಿ ಜನರ ಮೇಲೆ ದಾಳಿ ಮಾಡುತ್ತಿವೆ. 2023ರಲ್ಲಿ ಪಟ್ಟಣದ ಶಿವಾಜಿ ಪೇಟೆಯ ಆದಿತ್ಯ ಹನಮಂತ ಪವಾರ ಎಂಬ ಬಾಲಕನ ಮೇಲೆ ಬೀದಿ ನಾಯಿಗಳು ಸಾಮೂಹಿಕ ದಾಳಿ ನಡೆಸಿದ್ದವರು. ನಂತರ ಸ್ಥಳೀಯರು ನಾಯಿಗಳನ್ನು ಓಡಿಸಿ ಬಾಲಕನ್ನು ರಕ್ಷಿಸಿದ್ದರು.
ʼಗಜೇಂದ್ರಗಡದಲ್ಲಿ ಬೀದಿ ನಾಯಿಗಳು ಹಾಗೂ ಬೀದಿ ದನಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಕಡಿವಾಣಕ್ಕೆ ಸ್ಥಳೀಯ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದಾಗಿ ಒಂದು ಜೀವ ಹಾನಿಯಾಗಿದೆ. ಇನ್ನಾದರೂ ಸ್ಥಳೀಯ ಶಾಸಕರು, ಜಿಲ್ಲಾಡಳಿತ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದರ ಜೊತೆಗೆ ಮೃತ ಮಹಿಳೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕುʼ ಎಂದು ಬಿಜೆಪಿ ಮುಖಂಡ ಅಶೋಕ ವನ್ನಾಲ ಆಗ್ರಹಿಸಿದರು.
ಗಜೇಂದ್ರಗಡದಲ್ಲಿ ಬೀದಿ ನಾಯಿಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.ಬಸವರಾಜ ಬಳಗಾನೂರ, ಪ್ರಭಾರಿ ಮುಖ್ಯಾಧಿಕಾರಿ, ಪುರಸಭೆ, ಗಜೇಂದ್ರಗಡ.
ಬೀದಿ ನಾಯಿಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ ಮೃತ ಮಹಿಳೆ ಕುಟುಂಬಕ್ಕೆ ಪುರಸಭೆಯಿಂದ ₹3 ಲಕ್ಷ ಪರಿಹಾರ ಘೋಷಿಸಲಾಗಿದ್ದು, ಶಾಸಕರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹2 ಲಕ್ಷ ಪರಿಹಾರ ಕೊಡಿಸುವುದಾಗಿ ತಿಳಿಸಿದ್ದಾರೆ.ಸುಭಾಸ ಮ್ಯಾಗೇರಿ, ಅಧ್ಯಕ್ಷರು, ಪುರಸಭೆ, ಗಜೇಂದ್ರಗಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.