ADVERTISEMENT

World Environment Day: ‘ಜನ–ವನ’ದಲ್ಲಿ ತುಳುಕುವ ಹಸಿರು ನಗು

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ; 14 ಎಕರೆ ಜಾಗದಲ್ಲಿ ಯೋಜನೆ ನಿರ್ಮಾಣ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 5 ಜೂನ್ 2025, 6:13 IST
Last Updated 5 ಜೂನ್ 2025, 6:13 IST
ಗದುಗಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಹಸಿರಿನಿಂದ ನಳನಳಿಸುತ್ತಿರುವ ‘ಜನ–ವನ’
ಗದುಗಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಹಸಿರಿನಿಂದ ನಳನಳಿಸುತ್ತಿರುವ ‘ಜನ–ವನ’   

ಗದಗ: ಸಂಕಲ್ಪ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಎಸ್‌ಬಿಐ ಫೌಂಡೇಷನ್‌ ಸಹಯೋಗದಲ್ಲಿ ಇಲ್ಲಿನ ಮಹಾತ್ಮ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿನ 14 ಎಕರೆ ಜಾಗದಲ್ಲಿ ರೂಪಿಸಿದ್ದ ಜನ–ವನ ಯೋಜನೆ ಯಶ ಕಂಡಿದ್ದು, 19,200 ಗಿಡಗಳು ಹಸಿರಿನಿಂದ ನಳನಳಿಸುತ್ತಿವೆ.

ಮೂರು ವರ್ಷಗಳ ಹಿಂದೆ ಕೇವಲ ಗುಡ್ಡವಾಗಿದ್ದ ಈ ಜಾಗದಲ್ಲಿ ಆಲದ ಮರ, ಬೇವು, ಹುಣಸೆ, ಸಿಮರುಬಾ,ತಾಪ್ಸಿ, ತಬುಬಿಯಾ, ಬಂಗಾಳಿ, ಗಾಳಿ ಮರ, ಪೇರಲ, ಸೀತಾಫಲ, ನೇರಳೆ, ಅರಳಿ ಮರ, ಅತ್ತಿ ಮರ, ಹೊಂಗೆ ಮರ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಇಲ್ಲಿ ನೆಡಲಾಗಿತ್ತು.

ಗಿಡ ನೆಡುವುದರ ಜತೆಗೆ ಅವುಗಳ ಕಾಳಜಿಯನ್ನು ಜತನದಿಂದ ಮಾಡಿದ್ದರಿಂದ ಎಲ್ಲ ಗಿಡಗಳು ಉಳಿದುಕೊಂಡು, ಚೆನ್ನಾಗಿ ಬೆಳೆದು ಹಸಿರಿನ ನಗು ತುಳುಕಿಸುತ್ತಿವೆ. ಗಿಡಗಳನ್ನು ಬೆಂಕಿಯಿಂದ ಅವಘಡದಿಂದ ತಪ್ಪಿಸಲು ಮತ್ತು ಮಣ್ಣಿನ ಸವಕಳಿ ತಡೆಯಲು ಟ್ರಂಚ್‌ ನಿರ್ಮಾಣ ಮಾಡಲಾಗಿದೆ.

ADVERTISEMENT

ಇಲ್ಲಿ ನೆಟ್ಟಿರುವ ಗಿಡಗಳಿಗೆ ನೀರಿನ ನಿರಂತರ ಪೂರೈಕೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೊಳವೆಬಾವಿಗೆ ಟ್ವಿನ್ ರಿಂಗ್ ರೀಚಾರ್ಜ್ ವಿಧಾನ ಅಳವಡಿಸಲಾಗಿದೆ. ಇದರಿಂದ ಬೇಸಿಗೆ ಕಾಲದಲ್ಲಿಯೂ ಗಿಡಗಳಿಗೆ ನೀರಿನ ಕೊರತೆಯಾಗದಂತೆ ಪ್ರತಿಯೊಂದು ಗಿಡಕ್ಕೂ ನೀರಿನ ಪೂರೈಕೆ ಆಗುವಂತೆ ಯೋಜಿಸಲಾಗಿದೆ.

ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವ ಕಾಡಿದಾಗ ಹೊರಗಿನಿಂದ ಟ್ಯಾಂಕರ್‌ಗಳ ಮೂಲ ನೀರು ತಂದು ಪ್ರತಿಯೊಂದು ಗಿಡಕ್ಕೂ ನೀರು ಉಣಿಸಲಾಗಿದೆ. ಇದರಿಂದಾಗಿ ಗಿಡಗಳು ಫಲವತ್ತಾಗಿ ಬೆಳೆದು 14 ಎಕರೆ ಪ್ರದೇಶ ಹಚ್ಚ ಹಸಿರಾಗಿದೆ. ಮೈಮನಗಳಿಗೆ ಮುದ ನೀಡುತ್ತಿದೆ.

ಜನ ವನದಲ್ಲಿ ಗಿಡಗಳನ್ನು ಬೆಳೆಸುವುದರ ಜತೆಗೆ ಉದ್ಯಾನದಂತೆ ಜನರಿಗೆ ಅನುಕೂಲ ಕಲ್ಪಿಸುವ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗಿದೆ.

ಸಾರ್ವಜನಿಕರು ಕುಳಿತುಕೊಳ್ಳಲು ಚೆಂಚ್‌ ವ್ಯವಸ್ಥೆ, ಓಪನ್‌ ಜಿಮ್‌, ಬಯಲು ಸಭೆ ನಡೆಸಲು ಸ್ಥಳ ನಿರ್ಮಿಸಲಾಗಿದೆ. ಸೋಲಾರ್‌ ಲೈಟ್‌ ಅಳವಡಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಹಗಲಿನಂತೆ ರಾತ್ರಿ ವೇಳೆಯಲ್ಲೂ ಜನವನದ ಹಸಿರು ಸೌಂದರ್ಯ ಆಸ್ವಾದಿಸಲು ಇದು ನೆರವಾಗಿದೆ.

ಇಲ್ಲಿರುವ ಓಪನ್‌ ಮೀಟಿಂಗ್‌ ಜಾಗದಲ್ಲಿ ಸಾರ್ವಜನಿಕರು ಜನ್ಮದಿನಾಚರಣೆ, ಸಾಂಸ್ಕೃತಿಕ ಸಂಭ್ರಮದಂತಹ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಪರಿಸರ ಸಂರಕ್ಷಣೆಗೆ ಮಹತ್ವ ನೀಡಲಾಗಿದೆ. ಹಸಿರಿನ ಸಂರಕ್ಷಣೆ ಸ್ವಚ್ಛತೆ ಎಲ್ಲವನ್ನೂ ಬದ್ಧತೆಯಿಂದ ನಿರ್ವಹಿಸಿದ್ದರಿಂದ 14 ಎಕರೆ ಪ್ರದೇಶದಲ್ಲಿ ಉತ್ತಮ ಪರಿಸರ ನಿರ್ಮಾಣಗೊಂಡಿದೆ.
– ಎಸ್‌.ವಿ.ನಾಡಗೌಡರ, ಪ್ರಭಾರ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.