ನರೇಗಲ್ ಹೋಬಳಿಯ 3ನೇ ವಾರ್ಡಿನ ಮನೆಯ ಮುಂದಿನ ಗಿಡದಲ್ಲಿ ಕುಳಿತಿರುವ ಗುಬ್ಬಚ್ಚಿ
ನರೇಗಲ್: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೃಷಿ ಯೋಗ್ಯ ಭೂಮಿ ಹೊಂದಿರುವ ನರೇಗಲ್ ಹೋಬಳಿಯು ಪಾರಿವಾಳ, ಹದ್ದು, ನವಿಲು, ಚಂದ್ರಮುಕುಟ, ಬಾತುಕೋಳಿ, ಗಿಳಿ, ಕೌಜಾ, ಕಾಗೆ ಸೇರಿದಂತೆ ಬಗೆಬಗೆಯ ಬಾನಾಡಿಗಳ ತಾಣವೂ ಹೌದು. ಆದರೆ ರೈತರ ಒಡನಾಡಿ ಹಾಗೂ ಗ್ರಾಮೀಣರ ಬದುಕಿಗೆ ತೀರಾ ಹತ್ತಿರವಾದ ಗುಬ್ಬಚ್ಚಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಇದರಿಂದಾಗಿ ಗಿಡಗಳಲ್ಲಿ, ಮನೆಯ ಅಂಗಳದಲ್ಲಿ, ಹೊಲದಲ್ಲಿ ಹಿಂಡುಹಿಂಡಾಗಿ ಚಿಂವ್… ಚಿಂವ್… ಎನ್ನುತ್ತ, ಪುರ‍್ರನೆ ಹಾರುವ ಸಡಗರದ ದೃಶ್ಯಗಳು ಅಪರೂಪವಾಗಿವೆ.
ಜೀವವೈವಿಧ್ಯ ಸಂಶೋಧಕರ ಪ್ರಕಾರ, ಜನರು ಬಳಸುವ ಇಂಧನದಲ್ಲಿನ ರಾಸಾಯನಿಕದಿಂದ, ರೈತರು ಹೊಲಕ್ಕೆ ಬಳಕೆ ಮಾಡುವ ರಾಸಾಯನಿಕ ಗೊಬ್ಬರಗಳಿಂದ, ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕ ಔಷಧಗಳಿಂದ, ಯಥೇಚ್ಛವಾಗಿ ಬಳಕೆ ಮಾಡುತ್ತಿರುವ ಪ್ಲಾಸ್ಟಿಕ್‌ನಿಂದ ಮಣ್ಣು, ವಾತಾವರಣದ ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಮಾಲಿನ್ಯಕಾರಕ ಅಂಶಗಳು ಗುಬ್ಬಚ್ಚಿ ಮರಿಗಳ ಆಹಾರವಾದ ಕೀಟಗಳ ದೇಹವನ್ನು ಸೇರುತ್ತದೆ. ಇಂತಹ ಕೀಟಗಳನ್ನು ಗುಬ್ಬಿಗಳು ಸೇವಿಸಿದಾಗ ಅವುಗಳ ಸಂತಾನಶಕ್ತಿ ಕಡಿಮೆಯಾಗುತ್ತಿದೆ. ರಾಸಾಯನಿಕ ಬಳಕೆಯಿಂದ ಕೀಟಗಳು ಸತ್ತರೆ, ಗುಬ್ಬಚ್ಚಿ ಮತ್ತು ಮರಿಗಳ ಮೇಲೆ ಪರಿಣಾಮ ಬೀರುತ್ತಿದೆ.
‘ಗುಬ್ಬಚ್ಚಿಗಳಿಗೆ ಹೊಲದಲ್ಲಿ, ಮನೆಯ ಅಂಗಳಲ್ಲಿ ದವಸ ಧಾನ್ಯಗಳು ಸಿಗುತ್ತಿಲ್ಲ. ನರೇಗಲ್ ಹೋಬಳಿಯ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಗೋವಿನ ಜೋಳ, ತೊಗರಿ, ರಾಗಿ, ಸಜ್ಜೆ ಹಾಗೂ ಹಿಂಗಾರು ಬೆಳೆಗಳಾದ ಬಿಳಿಜೋಳ, ಗೋಧಿ, ಕಡಲೆ, ಕುಸುಬೆ, ಸೂರ್ಯಕಾಂತಿ ಮತ್ತಿತರ ಬೆಳೆ ಬೆಳೆಯುವಾಗ ರಾಸಾಯನಿಕ ಹಾಗೂ ಅವುಗಳ ಕಟಾವಿಗಾಗಿ ಯಂತ್ರಗಳನ್ನು ಬಳಕೆ ಮಾಡುತ್ತಿರುವ ಕಾರಣ ಹೊಲದಲ್ಲಿ ಕಾಳು, ದಂಟು, ಮೇವಿನ ಗುಡ್ಡೆ ಸಿಗುತ್ತಿಲ್ಲ. ಅದರಿಂದಾಗಿ ಬೆಳೆಯುವ ಗುಬ್ಬಚ್ಚಿ ಮರಿಗಳಿಗೆ ಅಗತ್ಯವಾದ ಪೌಷ್ಟಿಕ ಆಹಾರದ ಕೊರತೆಯಾಗಿದೆ. ಇದು ಗುಬ್ಬಚ್ಚಿಗಳ ಸಂತತಿ ವೃದ್ಧಿಗೆ ತೊಡಕಾಗಿದೆ’ ಎನ್ನುತ್ತಾರೆ ಜಕ್ಕಲಿ ಗ್ರಾಮದ ವನ್ಯಜೀವಿ ಛಾಯಾಗ್ರಾಹಕ ಸಂಗಮೇಶ ಕಡಗದ.
‘ಕಾಂಕ್ರೀಟ್ ಮನೆ, ಶಾಲೆ, ಇತರೆ ಕಟ್ಟಗಳ ಚಾವಣಿಯ ಸಂದಿಯಲ್ಲಿ ಗುಬ್ಬಚ್ಚಿಗಳು ಅನಿವಾರ್ಯವಾಗಿ ಗೂಡು ಕಟ್ಟುತ್ತಿವೆ. ಈಗಿನ ಏರು ಬಿಸಿಲಿಗೆ ಗುಬ್ಬಚ್ಚಿಗಳಿಗೆ ನಿತ್ಯದ ಆಹಾರ ಹಾಗೂ ನೀರಿನ ಕೊರತೆ ಉಂಟಾದ ಕಾರಣ ಅವುಗಳ ಸಂತತಿ ಕಡಿಮೆಯಾಗುತ್ತಿದೆ. ಸಾಧ್ಯವಾದಷ್ಟು ಅವುಗಳಿಗೆ ನೀರು, ಆಹಾರ ಪೂರೈಕೆ ಮಾಡಬೇಕು’ ಎನ್ನುತ್ತಾರೆ ಪರಿಸರ ಪ್ರೇಮಿ ಪ್ರಸಾದ ನಾಯಕ.
ಗುಚ್ಚಿಗಳು ಮರೆಯಾದರೆ ಕೃಷಿ ಹಾಗೂ ಜೀವವೈವಿಧ್ಯಕ್ಕೆ ನೇರವಾದ ಪರಿಣಾಮ ಬೀರಲಿದೆ. ಆದಕಾರಣ ಅವುಗಳ ರಕ್ಷಣೆಗೆ ಹಾಗೂ ಸಂತತಿ ಉಳಿವಿಗೆ ಮುಂದಾಗುವ ಅವಶ್ಯಕತೆಯಿದೆಮಂಜುನಾಥ ನಾಯಕ ಜೀವವೈವಿಧ್ಯ ಸಂಶೋಧಕ
ಗಿಡ–ಮರ ನಾಶ; ಆಹಾರ ಕೊರತೆ
‘ಊರಿನ ಸಮೀಪದ ಹೊಲಗಳು ನಗರೀಕರಣಕ್ಕೆ ಒಳಗಾದರೆ ಅಭಿವೃದ್ಧಿ ನೆಪದಲ್ಲಿ ಮರ ಗಿಡಗಳ ನಾಶ ಅಧಿಕವಾಗಿದೆ. ಸದ್ಯ ನರೇಗಲ್ ಹೋಬಳಿಯಾದ್ಯಂತ ಇರುವ ಹೊಲಗಳಲ್ಲಿ ಪವನ್ ವಿದ್ಯುತ್ ಕಂಬಗಳನ್ನು ಅಳವಡಿಸುವ ಸಲುವಾಗಿ ಕಳೆದೆರಡು ವರ್ಷಗಳಿಂದ ಲಗ್ಗೆಯಿಟ್ಟಿರುವ ಪವನ್ ವಿದ್ಯುತ್ ಕಂಪನಿಯವರು ಸೋಲಾರ್ ಕಂಪನಿಯರು ಆರ್.ಎಂ.ಸಿ. ಕಾಂಕ್ರೀಟ್ ಘಟಕದವರ ಹಾವಳಿಯಿಂದ ಕೃಷಿ ಭೂಮಿ ಅಪಾರ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಕಂಪನಿಯವರು ತಮ್ಮ ಕಾಮಗಾರಿಗಾಗಿ ರಸ್ತೆ ಬದಿ ಹಾಗೂ ಹೊಲಗಳಲ್ಲಿರುವ ನೂರಾರು ವರ್ಷಗಳ ದೊಡ್ಡ ಮರಗಳನ್ನು ಕುರುಚಲು ಅರಣ್ಯ ಪ್ರದೇಶವನ್ನು ನಾಶಪಡಿಸುತ್ತಿದ್ದಾರೆ’ ಎನ್ನುತ್ತಾರೆ ಕೋಟುಮಚಗಿ ಗ್ರಾಮದ ಸಾವಯವ ಕೃಷಿಕ ವೀರೇಶ ನೇಗಲಿ. ‘ಜಲಮೂಲಗಳಾದ ಹಳ್ಳ ಕಿರು ಹಳ್ಳ ಚೆಕ್ ಡ್ಯಾಂ ಕೆರೆ ಕೃಷಿ ಹೊಂಡಗಳನ್ನು ಸಹ ತಮ್ಮ ಅನುಕೂಲಕ್ಕೆ ತಕ್ಕಂತೆ ನಾಶಪಡಿಸುತ್ತಿದ್ದಾರೆ.
ಕಾಂಕ್ರೀಟ್ ಹಾಗೂ ಉಪಕರಣಗಳ ಅಳವಡಿಕೆಗೆ ವಿಪರೀತ ರಾಸಾಯನಿಕ ಬಳಕೆ ಮಾಡುತ್ತಿದ್ದಾರೆ. ಗಿಡಮರಗಳ ಜಾಗದಲ್ಲಿ ಸಾಲಾಗಿ ತಲೆ ಎತ್ತಿರುವ ಬೃಹತ್ ಆಕಾರದ ಫ್ಯಾನ್‌ಗಳು ಮೊಬೈಲ್ ಸಿಗ್ನಲ್ ಗೋಪುರಗಳು ಸೂಸುವ ವಿಕಿರಣಗಳ ಏಟಿಗೆ ಬಾನಾಡಿಗಳು ತತ್ತರಿಸಿ ಹೋಗಿವೆ. ಪರಿಣಾಮವಾಗಿ ಗುಬ್ಬಚ್ಚಿಗಳು ನರೇಗಲ್ ಹೋಬಳಿ ಪ್ರದೇಶದಿಂದ ಕ್ರಮೇಣ ಮಾಯವಾಗಿವೆ. ಇದು ಭವಿಷ್ಯದಲ್ಲಿ ಪರಿಣಾಮ ಬೀರಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.