ರೋಣ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶದ ಹೆಚ್ಚಾದ ಕಾರಣ ತಾಲ್ಲೂಕಿನ ರೈತರ ಹೆಸರು ಬೆಳೆಗೆ ಹಳದಿ ರೋಗ ಆವರಿಸುತ್ತಿದ್ದು, ರೋಗ ನಿಯಂತ್ರಣಕ್ಕೆ ರೈತರು ಪರದಾಡುವ ಸ್ಥಿತಿ ಉಂಟಾಗಿದೆ.
ತಾಲ್ಲೂಕಿನ ಬೆಳವಣಕಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿ ಈಗಾಗಲೇ ಫಸಲು ಬಿಡುವ ಹಂತಕ್ಕೆ ಹೆಸರು ಬೆಳೆ ತಲುಪಿದೆ. ಹಳದಿ ರೋಗ ವ್ಯಾಪಕವಾಗಿ ಹರಡುತ್ತಿರುವ ಕಾರಣ ಇಳುವರಿ ಕುಂಟಿತಗೊಳ್ಳುವ ಭೀತಿಗೆ ರೈತರು ಒಳಗಾಗಿದ್ದಾರೆ.
‘ರೈತರು ಈಗಾಗಲೇ ಸಾಕಷ್ಟು ಖರ್ಚು ಮಾಡಿದ್ದು, ರೋಗ ನಿಯಂತ್ರಣಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳನ್ನು ಡ್ರೋನ್ ಮೂಲಕ ಸಿಂಪರಣೆಗೆ ಸಾಕಷ್ಟು ಖರ್ಚು ಮಾಡಿದ್ದೇವೆ ಆದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ’ ಎಂದು ಬೆಳವಣಿಕಿ ಗ್ರಾಮದ ರೈತ ಶಿವಾನಂದ ಅಳಗವಾಡಿ ಹೇಳಿದರು.
‘ಹಳದಿ ರೋಗ ನಿಯಂತ್ರಣಕ್ಕೆ ಬಾರದಿದ್ದರೆ ಕಾಳು ಕಟ್ಟುವುದಿಲ್ಲ ಈ ಹಂತದವರೆಗೂ ಉತ್ತಮವಾಗಿ ಬೆಳೆ ಬಂದಿದ್ದರು ಫಸಲು ಬಿಡುವ ಸಮಯಕ್ಕೆ ಸರಿಯಾಗಿ ರೋಗ ವ್ಯಾಪಿಸಿದೆ’ ಎಂದು ರೈತ ಭೀಮಪ್ಪ ತಾಳಿ ಮತ್ತು ಬಸವಂತಪ್ಪ ಸುಣಗದ ಅಳಲು ತೋಡಿಕೊಂಡರು.
ರೋಗ ನಿಯಂತ್ರಣಕ್ಕೆ ಸಲಹೆ
ಹಳದಿ ರೋಗ ನಿಯಂತ್ರಣಕ್ಕೆ ಬಿತ್ತನೆ ಪೂರ್ವದಲ್ಲಿಯೇ ಇಮಿಡಾಕ್ಲೋಪ್ರೀಡ್ 60 ಎಫ್.ಎಸ್ 5 ಮಿ.ಗ್ರಾಂ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ಲೇಪನ ಮಾಡಿ ಬಿತ್ತನೆ ಮಾಡಬೇಕು. ರೋಗ ಪ್ರಾರಂಭದ ಹಂತದಲ್ಲಿ ಗುರುತಿಸಿ ರೋಗಪೀಡಿತ ಸಸಿಗಳನ್ನು ಕಿತ್ತು ಮಣ್ಣಿನಲ್ಲಿ ಹೂಳಬೇಕು. ರೋಗ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 0.3 ಗ್ರಾಂ ಥೈಯೋಮಿಥೋಕ್ಸಾಮ್ 25% ಡಬ್ಲೂಜಿ 10 ರಿಂದ 15 ದಿನಗಳ ಅಂತರದಲ್ಲಿ ಅಂಟು ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದು ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ತಹಶೀಲ್ದಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.