ADVERTISEMENT

ಬಜೆಟ್‍ನಲ್ಲಿ ಗದುಗಿಗೆ ‘ಸೊನ್ನೆ’: ಮುಜುಗರ ತರುವ ವಿಚಾರವೆಂದ ತೋಂಟದ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 11:32 IST
Last Updated 10 ಮಾರ್ಚ್ 2021, 11:32 IST

ಗದಗ: ‘ರಾಜ್ಯ ಸರ್ಕಾರವು 2021-22ನೇ ಸಾಲಿನ ಬಜೆಟ್‍ನಲ್ಲಿ ಗದಗ ಜಿಲ್ಲೆಗೆ ಪ್ರತ್ಯೇಕವಾಗಿ ಯಾವುದೇ ಹೊಸ ಯೋಜನೆ ಹಾಗೂ ನಿರ್ಮಾಣಗಳನ್ನು ಘೋಷಿಸದೆ ತೀವ್ರ ನಿರಾಶೆ ಉಂಟು ಮಾಡಿದೆ.

ಮಾಧ್ಯಮಗಳಲ್ಲಿ ‘ಯಾವ ಜಿಲ್ಲೆಗೆ ಯಾವ ಕೊಡುಗೆ’ ಕಾಲಂನಲ್ಲಿ ಗದಗ ಜಿಲ್ಲೆಯ ಮುಂದೆ ‘0’ ಎಂದು ತೋರಿಸಿರುವುದಂತೂ ಜಿಲ್ಲೆಯ ಜನರಿಗೆ ಮುಜುಗುರ ಉಂಟು ಮಾಡಿದೆ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ‌‌ ಹೇಳಿದ್ದಾರೆ.

‘ಗದಗ ಈಚೆಗೆ ನಿರ್ಮಾಣಗೊಂಡ ಜಿಲ್ಲೆಯಾಗಿದ್ದು, ಅದರ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ವಿಶೇಷ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿಡಬೇಕಿತ್ತು. ಜೊತೆಗೆ ಜಿಲ್ಲೆಯಲ್ಲಿ ಕೃಷಿ, ನೀರಾವರಿ, ಪರಿಸರ ರಕ್ಷಣೆಗೆ ಪೂರಕವಾದ ಮತ್ತು ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಯಾವುದಾದರೂ ಪ್ರತ್ಯೇಕ ಯೋಜನೆ ಘೋಷಿಸಬೇಕಾಗಿತ್ತು. ಕೊನೆಯ ಪಕ್ಷ ಕನ್ನಡ ನಾಡು- ನುಡಿ, ನೆಲ-ಜಲ, ಪರಿಸರ, ಕೋಮು ಸೌಹಾರ್ದಕ್ಕಾಗಿ ಅಹರ್ನಿಶಿ ಶ್ರಮಿಸಿದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೆಸರಿನಲ್ಲಿ ‘ಸ್ಮೃತಿ ಭವನ’ ನಿರ್ಮಿಸಲಾದರೂ ಅನುದಾನ ನೀಡಿ ಉತ್ತರ ಕರ್ನಾಟಕದ ಈ ಒಬ್ಬ ಜನಸಾಮಾನ್ಯರ ಸ್ವಾಮೀಜಿಯನ್ನಾದರೂ ದಕ್ಷಿಣದ ಆದಿಚುಂಚನಗಿರಿ, ತುಮಕೂರು, ಪೇಜಾವರ ಶ್ರೀಗಳನ್ನು ಗೌರವಿಸಿದಂತೆ ಗೌರವಿಸಬಹುದಾಗಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಇದಾವುದೂ ಬಜೆಟ್‍ನಲ್ಲಿ ಬರದೇ ಇರುವುದರಿಂದ ಸಹಜವಾಗಿಯೇ ಜಿಲ್ಲೆಯ ಜನರಿಗೆ ನಿರಾಶೆಯಾಗಿದೆ. ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಸರ್ಕಾರ ಶ್ರೀಗಳ ಹೆಸರಿನಲ್ಲಿ ‘ಸ್ಮೃತಿ ಭವನ’ ನಿರ್ಮಿಸುವುದಾದರೆ ಶ್ರೀಮಠದಿಂದ ಸಾಕಷ್ಟು ಸ್ಥಳಾವಕಾಶ ಒದಗಿಸಲಾಗುವುದು. ಜತೆಗೆ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಘೋಷಿಸಬೇಕು’ ಎಂದು ಶ್ರೀಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.