ADVERTISEMENT

ಅಂಗವಿಕಲರಿಗೆ ಸೌಲಭ್ಯ: ಕಾನೂನು ತಿದ್ದುಪಡಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 9:30 IST
Last Updated 25 ಡಿಸೆಂಬರ್ 2017, 9:30 IST
ಹಾಸನ ನಗರದ ಸಂಸ್ಕೃತ ಭವನದಲ್ಲಿ ಅನನ್ಯ ಟ್ರಸ್ಟ್ ಏರ್ಪಡಿಸಿದ್ದ ಅಂಗವಿಕಲರ ದಿನಾಚರಣೆ, ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಡಾ.ಗುರುರಾಜ್‌ ಹೆಬ್ಬಾರ್‌ ಮಾತನಾಡಿದರು.
ಹಾಸನ ನಗರದ ಸಂಸ್ಕೃತ ಭವನದಲ್ಲಿ ಅನನ್ಯ ಟ್ರಸ್ಟ್ ಏರ್ಪಡಿಸಿದ್ದ ಅಂಗವಿಕಲರ ದಿನಾಚರಣೆ, ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಡಾ.ಗುರುರಾಜ್‌ ಹೆಬ್ಬಾರ್‌ ಮಾತನಾಡಿದರು.   

ಹಾಸನ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಅಂಗವಿಕಲರಿಗೆ ಮಾಹಿತಿಯೇ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ವಿಜಯಕುಮಾರಿ ಮುರಾರಪ್ಪ ಹೇಳಿದರು. ನಗರದ ಸಂಸ್ಕತ ಭವನದಲ್ಲಿ ಅನನ್ಯ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಆಂಗವಿಕಲರ ದಿನಾಚರಣೆ ಮತ್ತು ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರದ ಯೋಜನೆಗಳ ಲಾಭ ಪಡೆಯಲು ಶೇ 75 ರಷ್ಟು ಅಂಗವಿಕಲತೆ ಇರಬೇಕು ಎಂಬ ಮಾನದಂಡವನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ತೆಗೆದುಹಾಕಿ ಎಲ್ಲರಿಗೂ ಸೌಲಭ್ಯ ಕಲ್ಪಿಸಬೇಕು. ಹಾಗೆಯೇ ಅಂಗವಿಕಲರ ರಕ್ಷಣೆಗೆ ಇರುವ ಕಾನೂನನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತ ಎಂ.ಎಚ್.ಪೃಥ್ವಿರಾಜ್ ಮಾತನಾಡಿ, ಕಷ್ಟಗಳು ಎಲ್ಲರಿಗೂ ಇರುತ್ತವೆ. ಅದನ್ನು ಮೆಟ್ಟಿ ನಿಲ್ಲಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳಿಗೆ ಕಾದು ಕುಳಿತುಕೊಳ್ಳಬಾರದು. ಇರುವ ಸೌಲಭ್ಯ ತಿಳಿದುಕೊಂಡು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 10 ಲಕ್ಷ ಮಂದಿ ಹುಟ್ಟು ಅಂಗವಿಕಲರಿದ್ದಾರೆ.

ADVERTISEMENT

ಅಪಘಾತದಿಂದ ಅಂಗಾಂಗ ಕಳೆದುಕೊಂಡವರು ಸೇರಿದರೆ ಅಂದಾಜು 20 ಲಕ್ಷ ಮಂದಿ ಇರಬಹುದು. ಅಂಗವಿಕಲರನ್ನು ತಾತ್ಸಾರ ಅಥವಾ ನಿಂದನೆ ಮಾಡಿದರೆ 6 ತಿಂಗಳಿಂದ 2 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂಬ ಕಾನೂನು ಇದೆ. ಜತೆಗೆ ಈಗ ಆಸ್ತಿ ಹಕ್ಕು ಸಹ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾಮಧೇನು ವಿದ್ಯಾಶ್ರಮದ ಡಾ. ಗುರುರಾಜ್ ಹೆಬ್ಬಾರ್ ಮಾತನಾಡಿ, ದೇಹಕ್ಕೆ ಮಾತ್ರ ಅಂಗವಿಕಲತೆ ಹೊರತು ಮನಸ್ಸಿಗೆ ಅಲ್ಲ. ಹಾಗಾಗಿ ಕೀಳರಿಮೆ ತೊಡೆದುಹಾಕಿ ಸಿಗುವ ಅವಕಾಶ ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ. ಜಯಶ್ರೀ ಮಾತನಾಡಿ, ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳು ಅಂಗವಿಕಲರ ಜತೆ ಸೌಜನ್ಯವಾಗಿ ವರ್ತಿಸುವುದಿಲ್ಲ. ಆ ಕಾರಣದಿಂದಾಗಿ ಎಷ್ಟೋ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಕ್ರೀಡಾಪಟು ಕೆ.ಆರ್. ಶಾಂತಕುಮಾರ್, ಎಂ.ಎಚ್‌. ಪೃಥ್ವಿರಾಜ್ ಮತ್ತು ವಿಜಯಕುಮಾರಿ ಮುರಾರಪ್ಪ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ನಿರ್ದೇಶಕಿ ಡಾ. ಎ.ಸಾವಿತ್ರಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಜೆ.ಬಿ. ವಿಜಯಲಕ್ಷ್ಮಿ ಇದ್ದರು. ಶಿಕ್ಷಕಿ ವನಜಾ ಸ್ವಾಗತಿಸಿದರು.

ಸಲಕರಣೆ ವಿತರಣೆ
ಸಮಾರಂಭದಲ್ಲಿ ಅಂಗವಿಕಲರಾದ ಬಿ.ಆರ್. ನಾರಾಯಣ್, ಲಕ್ಷ್ಮಮ್ಮ ಕೃಷ್ಣೇಗೌಡ ಅವರಿಗೆ ಊರುಗೋಲು ಹಾಗೂ ಭಾಗ್ಯ, ಕಾಂತರಾಜು, ನಿಂಗಾಚಾರ್‌, ದಿನೇಶ್ ಅವರಿಗೆ ಸ್ವತಂತ್ರ್ಯವಾಗಿ ನಡೆದಾಡುವ ಸಾಧನ ವಿತರಿಸಲಾಯಿತು.

10 ಲಕ್ಷ ರಾಜ್ಯದಲ್ಲಿ ಹುಟ್ಟು ಅಂಗವಿಕಲರು

20 ಲಕ್ಷ ಅಪಘಾತದಲ್ಲಿ ಅಂಗಾಂಗ ಕಳೆದುಕೊಂಡವರು

2 ವರ್ಷ ಜೈಲು ಅಂಗವಿಕಲರ ನಿಂದನೆ ಮಾಡಿದರೆ

ಶೇ 75 ಸೌಲಭ್ಯ ಪಡೆಯಲು ಇರುವ ಅಂಗವಿಕಲತೆ

* * 

ಸಮಾಜದಲ್ಲಿ ಅಂಗವಿಕಲರನ್ನು ನೋಡುವ ಮನಸ್ಥಿತಿ ಬದಲಾಗಬೇಕು.
ಕೆ.ಟಿ.ಜಯಶ್ರೀ, ಅನನ್ಯ ಟ್ರಸ್ಟ್‌ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.