ADVERTISEMENT

ಅಕ್ಕಿ ಗಿರಣಿ ಮಾಲೀಕರ ಧರಣಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:07 IST
Last Updated 18 ಡಿಸೆಂಬರ್ 2013, 5:07 IST

ಹಾಸನ: ‘ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಲೆವಿ ಅಕ್ಕಿ ಸಂಗ್ರಹಣಾ ಪದ್ಧತಿ ಅವೈಜ್ಞಾನಿಕವಾಗಿದೆ. ಅದನ್ನು ಬದಲಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು. ‘ರಾಜ್ಯ ಸರ್ಕಾರ ಈ ಹಿಂದೆ ಗಿರಣಿ ಮಾಲೀಕರಿಂದ 1.5 ಲಕ್ಷ ಟನ್‌ ಲೆವಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿತ್ತು. 2013–14ನೇ ಸಾಲಿನಿಂದ ಅದನ್ನು 13.5 ಲಕ್ಷ ಟನ್‌ಗೆ ಹೆಚ್ಚಿಸಿದೆ. ಲೆವಿ ಪ್ರಮಾಣವನ್ನು 10 ಪಟ್ಟು ಹೆಚ್ಚಳ ಮಾಡುವ ಮೂಲಕ ಅಕ್ಕಿ ಗಿರಣಿ ಮಾಲೀಕರನ್ನು ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದೆ. ಹಾಗಾಗಿ ಲೆವಿ ನೀತಿಯನ್ನು ಕೂಡಲೇ ಬದಲಿಸಬೇಕು ಎಂದರು.

ಸರ್ಕಾರ ಬೆಂಬಲ ಬೆಲೆ ಅನ್ವಯ 1650 ರೂಪಾಯಿ ಬೆಲೆಗೆ ಭತ್ತ ಖರೀದಿಸಿ, 2160 ರೂಪಾಯಿ ಬೆಲೆಗೆ ಅಕ್ಕಿ ಮಾರಾಟ ಮಾಡುವಂತೆ ಆದೇಶಿಸಿದೆ. ಇದರಿಂದ  ನಾವು ಲಾಭವಿಲ್ಲದೆ ಖರೀದಿಸಿ ಭತ್ತ ಅಕ್ಕಿ ಮರಾಟ ಮಾಡಬೇಕಾದ ಸ್ಥಿತಿ ಬಂದಿದೆ. ಸರ್ಕಾರ ಬೆಂಬಲ ಬೆಲೆಗೆ ಅನುಗುಣವಾಗಿ ಅಕ್ಕಿ ಬೆಲೆ ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ 162 ಅಕ್ಕಿ ಗಿರಣಿಗಳಿದ್ದು, ಎಲ್ಲಾ ಗಿರಣಿಗಳನ್ನು ಮುಚ್ಚಲಾಗಿವೆ. ರಾಜ್ಯ ಸರ್ಕಾರ ಕೂಡಲೇ ಸಮಸ್ಯ ಬಗೆಹರಿಸದಿದ್ದಲ್ಲಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಅಕ್ಕಿ ಗಿರಿಣಿ ಮಾಲೀಕರ ಸಂಘದ ಸದಸ್ಯರಾದ ಜಗದೀಶ್‌, ವಸಂತ್ ಕುಮಾರ್‌, ಮಂಜುನಾಥ್‌, ಶಶಿ ಕುಮಾರ್‌, ರುದ್ರೇಶ್‌, ಶಶಿ, ಗಿರೀಶ್‌, ಅಶೋಕ್‌ ಕುಮಾರ್‌, ಪ್ರಶಾಂತ್‌  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.