ADVERTISEMENT

ಅಕ್ರಮ ಜಲ್ಲಿ: ಸಿಐಡಿ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:44 IST
Last Updated 17 ಸೆಪ್ಟೆಂಬರ್ 2013, 6:44 IST

ಹಾಸನ: ‘ದುದ್ದ ರಸ್ತೆಯ ಹೆಸರಿನಲ್ಲಿ ಅರಸೀಕೆರೆ ತಾಲ್ಲೂಕಿನ ರಂಗಾಪುರ ಕಾವಲು ವ್ಯಾಪ್ತಿಯಿಂದ 1.5 ಲಕ್ಷ ಕ್ಯೂಬಿಕ್‌ ಮೀಟರ್‌ ಜಲ್ಲಿ ತೆಗೆದು ಬೇರೆ ಕಡೆಗೆ ಸಾಗಿಸಿರುವ ಬಗ್ಗೆ ದಾಖಲೆಗಳಿವೆ. ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಅಂಥವರ ಕೈಕತ್ತರಿಸಿಕೊಳ್ಳುತ್ತೇನೆ ಎಂಬ ಹೇಳಿಕೆ ಕೊಡುವ ಬದಲು ತಮ್ಮ ಲೆಟರ್‌ಹೆಡ್‌ನಲ್ಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ಬಗ್ಗೆ ಸಿಐಡಿ ತನಿಖೆ ನಡೆಸಲು ಒತ್ತಾಯಿಸಲಿ’ ಎಂದು ಕಾಂಗ್ರೆಸ್‌ ಮುಖಂಡ ಪಟೇಲ್‌ ಶಿವಣ್ಣ ಸವಾಲು ಹಾಕಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ರಮದಲ್ಲಿ ನನ್ನ ಪಾಲಿರುವುದು ಸಾಬೀತಾದರೆ ಕೈ ಕತ್ತರಿಸಿಕೊಳ್ಳುತ್ತೇನೆ ಎಂದು ಶಾಸಕರು ಹೇಳಿದ್ದಾರೆ. ಒಂದರ್ಥದಲ್ಲಿ ಈ ಹೇಳಿಕೆ ಅವರ ವಿರುದ್ಧ ದೂರು ನೀಡಲು ಬಂದವರ ಕೈ ಕತ್ತರಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದಂತಿದೆ. ಇದು ಒಬ್ಬ ಶಾಸಕನಿಗೆ ಶೋಭೆ ತರುವ ಹೇಳಿಕೆ ಅಲ್ಲ. ಇದರ ಬದಲು ಯಾವುದೇ ರೂಪದಲ್ಲಿ ತನಿಖೆ ನಡೆಸಿ ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡಿ ಎಂದು ಅವರು ಪತ್ರ ಬರೆಯಬಹುದಾಗಿತ್ತು’ ಎಂದರು.

‘ರಂಗಾಪುರ ಕಾವಲಿನಿಂದ ತೆಗೆದಿರುವ ಜಲ್ಲಿಗೆ ಸಂಬಂಧಿಸಿದಂತೆ ಕೆಆರ್‌ಡಿಸಿಎಲ್‌ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಬೇರೆಬೇರೆ ವರದಿ ನೀಡುತ್ತಿದ್ದಾರೆ. ಕೆಆರ್‌ಡಿಸಿಎಲ್‌ನವರು 77 ಸಾವಿರ ಕ್ಯೂಬಿಕ್‌ ಮೀಟರ್‌ ಜಲ್ಲಿ ತೆಗೆಯಲಾಗಿದೆ ಎಂದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು 42,940 ಕ್ಯೂಬಿಕ್‌ ಮೀಟರ್‌ ಎನ್ನುತ್ತಿದ್ದಾರೆ. ವಾಸ್ತವವಾಗಿ 1.5ಲಕ್ಷ ಕ್ಯೂಬಿಕ್‌ ಮೀಟರ್‌ ಜಲ್ಲಿ ತೆಗೆಯಲಾಗಿದೆ. ಇದರಿಂದ 70 ಲಕ್ಷ ರೂಪಾಯಿ ನಷ್ಟವಾಗಿದೆ ಎಂದರು.

‘ಈ ಸಂಸ್ಥೆಯವರು ತಮಗೆ ಆದಾಯ ತಂದುಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಶಾಸಕರು ತನ್ನ ವಚರ್ಸ್ಸನ್ನು ಬಳಸಿಕೊಂಡು ಕಂಪನಿಗೆ ವಿಧಿಸಬೇಕಾಗಿದ್ದ 18 ಕೋಟಿ ರೂಪಾಯಿ ದಂಡವನ್ನು ರದ್ದು ಮಾಡಿಸಿದ್ದಾರೆ. ಕಂಪನಿಯವರೇ ಸರ್ಕಾರದ ಜತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಿಗದಿತ ದಿನದಂದು ಕೆಲಸ ಮುಗಿಸದಿದ್ದಲ್ಲಿ ದಂಡ ವಿಧಿಸಲು ಅವಕಾಶವಿದೆ. ಆ ಪ್ರಕಾರ ಅವರಿಗೆ 18 ಕೋಟಿ ರೂಪಾಯಿ ದಂಡ ವಿಧಿಸಬೇಕಾಗಿತ್ತು. ಎಂದರು.
‘ಇದೊಂದೇ ಅಲ್ಲ, ಕೆರೆ ಒತ್ತುವರಿ, ಕಾಂಕ್ರೀಟ್‌ ರಸ್ತೆ ನಿರ್ಮಾಣ ಸೇರಿದಂತೆ ತಾಲ್ಲೂಕಿನಲ್ಲಿ ನೂರಾರು ಕೋಟಿ ರೂಪಾಯಿಯ ಅಕ್ರಮ ನಡೆದಿದ್ದು ಶೀಘ್ರದಲ್ಲೇ ಎಲ್ಲ ದಾಖಲೆಗಳನ್ನು ಮಾಧ್ಯಮದ ಮುಂದಿಡುತ್ತೇವೆ’ ಎಂದು ಶಿವಣ್ಣ ನುಡಿದರು.

ಸಮುದಾಯ ಭವನಕ್ಕೆ ಹಣ
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳವರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಶೇ 7.5ರ ಅನುದಾನವನ್ನು ಸಮುದಾಯ ಭವನ ನಿರ್ಮಾಣಕ್ಕೆ ನೀಡಲು ಅವಕಾಶವಿಲ್ಲ. ಇದರಿಂದಾಗಿ ಅನೇಕ ಸಣ್ಣ ಸಮುದಾಯಗಳಿಗೆ ಸಮುದಾಯ ಭವನಗಳೇ ಇಲ್ಲದಂತಾಗಿದೆ. ನಿಯಮಾವಳಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಶೇ 7.5ರ ಅನುದಾನದಲ್ಲಿ ಸಮುದಾಯಭವನಗಳಿಗೂ ಹಣ ಬಿಡುಗಡೆಗೆ ಅವಕಾಶ ಒದಗಿಸಬೇಕು ಎಂದು ಶಿವಣ್ಣ ಆಗ್ರಹಿಸಿದರು.

‘ಈ ಬಗ್ಗೆ ನಾವು ಈಗಾಗಲೇ ಸರ್ಕಾಕ್ಕೆ ಮನವಿ ಸಲ್ಲಿಸಿದ್ದೇವೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದು ವರಿದಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಂತದಲ್ಲಿ ಚಿಂತನೆ ನಡೆಯುತ್ತಿದೆ’ ಎಂದರು. ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ  ನಾರಾಯಣಗೌಡ, ಬಾಲಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.