ADVERTISEMENT

ಅಕ್ಷರಸ್ಥರ ಊರಲ್ಲಿ ಅಭಿವೃದ್ಧಿ ಶೂನ್ಯ!

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 8:15 IST
Last Updated 10 ಅಕ್ಟೋಬರ್ 2012, 8:15 IST

ಹುಣಸೂರು: ತಾಲ್ಲೂಕಿನ ತಟ್ಟೆಕೆರೆ ಗ್ರಾಮ ಸುಶಿಕ್ಷಿತರಿಂದ ಕೂಡಿದೆ. ಆದರೂ ಸಂವಿಧಾನಾತ್ಮಕವಾಗಿ ಗ್ರಾಮಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವಲ್ಲಿ ಇಲ್ಲಿನ ಜನ ಹಿಂದೆ ಬಿದ್ದಿದ್ದಾರೆ.

ಗ್ರಾಮದ ಒಂದು ಭಾಗದಲ್ಲಿ ಉತ್ತಮ ರಸ್ತೆ ಇದ್ದರೆ, ಚಂರಡಿ ಇಲ್ಲ. ಮತ್ತೊಂದೆಡೆ ಚರಂಡಿ ಇದ್ದರೆ ರಸ್ತೆ ಇಲ್ಲ. ಇವೆರಡೂ ಇದ್ದ ಕಡೆ ಬೀದಿ ದೀಪ ಇಲ್ಲ. ಹೀಗೆ ಇಡೀ ಗ್ರಾಮದಲ್ಲಿ ಒಂದಿಲ್ಲೊಂದು ಸಮಸ್ಯೆ ಕಾಣಬಹುದು.
ಗ್ರಾಮಕ್ಕೆ ಪ್ರವೇಶ ನೀಡುವ ಮುಖ್ಯ ರಸ್ತೆ ಅಗಲವಾಗಿ, ಚೊಕ್ಕಟವಾಗಿದೆ. ಆದರೆ ಇಕ್ಕೆಲಗಳಲ್ಲಿ ಚರಂಡಿ ಇಲ್ಲ.

ಮನೆಗಳಿಂದ ಬರುವ ತ್ಯಾಜ್ಯವೆಲ್ಲ ರಸ್ತೆಯಲ್ಲೇ ಹರಿಯುತ್ತದೆ. ಗ್ರಾಮಕ್ಕೆ ಕುಡಿಯುವ ನೀರಿನ ಮೂಲಗಳ ಕೊರತೆ ಇಲ್ಲ. ಆದರೆ, ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಇಲ್ಲಿ ಮಹಿಳಾ ವೈದ್ಯರು ಇಲ್ಲದ್ದರಿಂದ ಮಹಿಳೆಯರು, ಗರ್ಭಿಣಿಯರು ತೊಂದರೆ ಅನುಭವಿಸಬೇಕಾಗಿದೆ. ತಟ್ಟೆಕೆರೆ ಸುತ್ತಲಿನ ಸಾರ್ವಜನಿಕರು ಸಹ ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ. ಆದರೆ, ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ.

ಪಶು ಆಸ್ಪತ್ರೆ ಮೊದಲ ಅಗತ್ಯ
ತಟ್ಟೆಕೆರೆ ಗ್ರಾಮದಲ್ಲಿ ಅಂದಾಜು 2 ಸಾವಿರಕ್ಕೂ ಹೆಚ್ಚು ಜಾನುವಾರುಗಳಿದ್ದು, ಅವುಗಳ ಆರೋಗ್ಯ ತಪಾಸಣೆಗೆ ಪಶು ಆಸ್ಪತ್ರೆ ಅಗತ್ಯವಿದೆ. ಸದ್ಯ ಇರುವ ಜಾನುವಾರುಗಳ ಕೃತಕ ಗರ್ಭಧಾರಣೆ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಇದರಿಂದ ಜಾನುವಾರುಗಳ ಆರೋಗ್ಯ ಕಾಪಾಡಲು ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

`ಶೌಚಾಲಯ ನಿರ್ಮಿಸಲು ಗ್ರಾಮಸ್ಥರು ಉತ್ಸುಕತೆಯಿಂದ ಗುಂಡಿಗಳನ್ನು ತೆಗೆದರಾದರೂ ಫಲಾನುಭವಿಗಳಿಗೆ ಯೋಜನೆಯ ಹಣ ಬರಲಿಲ್ಲ. ಇದರಿಂದ ಬೇಸತ್ತ ಜನ ತೆಗೆದ ಗುಂಡಿಗಳನ್ನು ಮುಚ್ಚಿದ್ದಾರೆ~ ಎನ್ನುತ್ತಾರೆ ಕೃಷಿಕ ಸುರೇಶ.

ಅಚ್ಚರಿ ಎಂದರೆ ತಟ್ಟೆಕೆರೆಯನ್ನು `ಸುವರ್ಣ ಗ್ರಾಮ~ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಭಿವೃದ್ಧಿ ಮಾತ್ರ ಶೂನ್ಯ. ಈ ಯೋಜನೆಯಲ್ಲಿ ಬಂದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣ ಮೂಲಭೂತ ಸವಲತ್ತು ಕಲ್ಪಿಸಲಾಗಿಲ್ಲ ಎಂಬುದು ಸ್ಥಳೀಯರ ದೂರು.

ಅನುದಾನದ ಕೊರತೆ
ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೇರವಾಗಿ ಬರುತ್ತದೆ ಎಂಬುದು ಪತ್ರಿಕೆಗಳಲ್ಲಿ ಮಾತ್ರ ಕಾಣಿಸುತ್ತದೆ. ವಾಸ್ತವವಾಗಿ ನಮ್ಮ ಗ್ರಾಮ ಪಂಚಾಯಿತಿ ಅನುದಾನ ಕೊರತೆ ಎದುರಿಸುತ್ತಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಡೆಸಲು ಸಾಕಷ್ಟು ಅವಕಾಶವಿದ್ದರೂ ಸರ್ಕಾರ ನೀಡುವ ಕೂಲಿ ರೂ. 150. ಆದರೆ, ಕೃಷಿ ಚಟುವಟಿಕೆಯಲ್ಲಿ 250 ರಿಂದ 300 ರೂಪಾಯಿ ಸಿಗುತ್ತದೆ. ಹೀಗಾಗಿ ಈ ಯೋಜನೆಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆ.
-ರಾಮೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ

ಶೌಚಾಲಯಕ್ಕೆ ಸಹಾಯಧನ ನೀಡಿಲ್ಲ
ಪ್ರತಿಯೊಂದು ಮನೆಯಲ್ಲಿಯೂ ಶೌಚಾಲಯ ಇರಬೇಕು ಎಂಬ ಸರ್ಕಾರದ ಆಶಯ ಇದ್ದರೂ ಬಹುಪಾಲು ಜನ ಶೌಚಾಲಯ ಹೊಂದಿಲ್ಲ. ಸಾರ್ವನಿಕ ಆಸ್ಪತ್ರೆಯಲ್ಲೇ ಶೌಚಾಲಯ ಸೌಲಭ್ಯವಿಲ್ಲ. ಪಂಚಾಯಿತಿ ಸಹಾಯ ಧನ ನೀಡದಿರುವುದೇ ಇದಕ್ಕೆ ಕಾರಣ.
-ನಾಗಣ್ಣಚಾರ್, ರೈತಸಂಘದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.