ADVERTISEMENT

ಅಣತಿ, ಸಂತೇಶಿವರ ಕೆರೆಗಳಿಗೆ ನೀರು: ಶೋಭಾ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:49 IST
Last Updated 20 ಡಿಸೆಂಬರ್ 2012, 6:49 IST

ಚನ್ನರಾಯಪಟ್ಟಣ: ಬಾಗೂರು- ನವಿಲೆ ಏತ ನೀರಾವರಿ ಯೋಜನೆಯಿಂದ ಪೈಪ್‌ಲೈನ್ ಮೂಲಕ ಅಣತಿ, ಸಂತೇಶಿವರ ಗ್ರಾಮದ ಕೆರೆಗಳಿಗೆ ನೀರು ಹರಿಸಲು ಪ್ರಯತ್ನಿಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅಣತಿ ಗ್ರಾಮದಲ್ಲಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ದಿಗಂಬರೇಶ್ವರ, ರುದ್ರೇಶ್ವರಸ್ವಾಮಿ, ರೇವಣ ಸಿದ್ದೇಶ್ವರಸ್ವಾಮಿಯ ರಾಜಗೋಪುರದ ಉದ್ಘಾಟನೆ ನೆರವೇರಿಸಿ ಸೋಮವಾರ ಅವರು ಮಾತನಾಡಿದರು. ಕಾಲುವೆಗಳ ಮೂಲಕ ನೀರು ಹರಿಸಿದರೆ ಅಲ್ಲಲ್ಲಿ ನೀರು ಸೋರಿಕೆಯಾಗುತ್ತದೆ.

ಆದ್ದರಿಂದ ಪೈಪ್‌ಲೈನ್ ಮೂಲಕ ಕೆರೆಗೆ ನೀರು ಹರಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ರಾಜ ಮಹಾರಾಜರು ಕೆರೆಗಳನ್ನು ಕಟ್ಟಿಸಿದ್ದರು. ಆದರೆ ಸರ್ಕಾರಗಳು ಅಸ್ತಿತ್ವಕ್ಕೆ ಬಂದ ನಂತರ ಒಂದೇ ಒಂದು ಕೆರೆ ನಿರ್ಮಿಸಿಲ್ಲ.

ಕೆರೆಗಳನ್ನು ಮುಚ್ಚಿ ನಿವೇಶನ ಮಾಡಲಾಗುತ್ತಿದೆ ಎಂದು ದೂರಿದ ಅವರು ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಹಿಂದೆ 14 ಸಾವಿರ ಹಳ್ಳಿಗಳಲ್ಲಿನ ಜನತೆ ಅಶುದ್ಧ ನೀರು ಕುಡಿಯುತ್ತ್ದ್ದಿದರು. ಆ ಪ್ರಮಾಣ ಈಗ 20 ಸಾವಿರ ಹಳ್ಳಿಗಳನ್ನು ದಾಟಿದೆ ಎಂದರು.

ಶಾಸಕ ಸಿ.ಎಸ್. ಪುಟ್ಟೇಗೌಡ, ತಿಪಟೂರಿನ ಷಡಕ್ಷರ ಮಠಾಧೀಶ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಎ.ಈ. ಚಂದ್ರಶೇಖರ್, ಎಚ್.ಎಸ್. ವಿಜಯಕುಮಾರ್, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ. ಗೋಪಾಲಸ್ವಾಮಿ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.