ADVERTISEMENT

ಅನುಷ್ಠಾನಕ್ಕೆ ಹರ್ಷ ವ್ಯಕ್ತಪಡಿಸಿದ ಶಾಸಕ ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:10 IST
Last Updated 28 ಜನವರಿ 2012, 10:10 IST
ಅನುಷ್ಠಾನಕ್ಕೆ ಹರ್ಷ ವ್ಯಕ್ತಪಡಿಸಿದ ಶಾಸಕ ಶಿವಲಿಂಗೇಗೌಡ
ಅನುಷ್ಠಾನಕ್ಕೆ ಹರ್ಷ ವ್ಯಕ್ತಪಡಿಸಿದ ಶಾಸಕ ಶಿವಲಿಂಗೇಗೌಡ   

ಅರಸೀಕೆರೆ: ತಾಲ್ಲೂಕಿನ 64 ಹೆಚ್ಚು ಹಳ್ಳಿಗಳಿಗೆ ಹೇಮಾವತಿ ನದಿ ಮೂಲ ದಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಕಾಮಸಮುದ್ರ ಕೆರೆಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಂಡಿರುವುದು ಹರ್ಷ ತಂದಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಗುರುವಾರ ಸಂಜೆ ತಿಳಿಸಿದರು.

ತಾಲ್ಲೂಕಿನ ಕಾಮಸಮುದ್ರ ಗ್ರಾಮದ ಕೆರೆ ಕೋಡಿ ಬಳಿ ಹೇಮಾವತಿ ನದಿ ಮೂಲದಿಂದ ಕಾಮಸಮುದ್ರ ಕೆರೆಗೆ ನೀರು ಹರಿಸುವ ಯೋಜನೆಯ ಕಾಮ ಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಮಾತನಾಡಿದರು.
ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಜನತೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಜನತೆಯ ಬಹಳ ವರ್ಷಗಳ ಬೇಡಿಕೆ ಈಗ ನನಸಾಗುತ್ತಿದೆ.

ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೊನ್ನವಳ್ಳಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿತ್ತು. ಆದರೆ, ತಾಲ್ಲೂಕಿನ ಕಾಮಸಮುದ್ರ ಕೃಷ್ಣ ನೀರಾವರಿ ನಿಗಮಕ್ಕೆ ಸೇರಿದ್ದರಿಂದ ಸುಪ್ರಿಂಕೋರ್ಟು ತಡೆಯಾಜ್ಞೆ ನೀಡಿತ್ತು. ಆದ್ದರಿಂದ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು ಎಂದು ಹೇಳಿದರು.

ಅರಸೀಕೆರೆ ಪಟ್ಟಣ ಹಾಗೂ ಗಂಡಸಿ ಹೋಬಳಿಗೆ ಚನ್ನರಾಯಪಟ್ಟಣದ ಘನ್ನಿಗಡದ ಬಳಿ ಹೇಮಾವತಿ ನದಿ ಮೂಲದಿಂದ 69 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಸರ್ಕಾರ ಮಂಜೂರಾತಿ ನೀಡಿದ್ದು, ಯಗಚಿ ನದಿ ಮೂಲದಿಂದ ಜಾವಗಲ್ ಹಾಗೂ ಬಾಣಾವರ ಹೋಬಳಿಯ ಹಲವು ಗ್ರಾಮಗಳ ಜನತೆಗೆ ಕುಡಿಯುವ ನೀರೊದಗಿಸುವ ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದು ಶಾಸಕ ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಜೆಡಿ.ಎಸ್ ಮುಖಂಡ ಸಿದ್ದರಾಮಶೆಟ್ಟಿ, ಜಿಲ್ಲಾ ವಾಲ್ಮೆಕಿ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಹನುಮಪ್ಪ ಮಾತನಾಡಿದರು. ತಾ.ಪಂ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಹಾರನಹಳ್ಳಿ ಶಿವ ಮೂರ್ತಿ, ಸದಸ್ಯರಾದ ಕೆ.ಎಂ. ನಂಜುಂಡಪ್ಪ, ಲಕ್ಷ್ಮಣ, ಗೀತಾ, ಜಿ.ಪಂ ಸದಸ್ಯೆ ಪಾರ್ವತಮ್ಮ, ಎ.ಪಿ.ಎಂಸಿ ಅಧ್ಯಕ್ಷ ಆಶೋಕ್ ಕುಮಾರ್, ಉಪಾಧ್ಯಕ್ಷ ಕೆ.ಎಂ. ಸನಾವುಲ್ಲಾ, ಸದಸ್ಯರಾದ ಮುರುಂಡಿ ಶಿವಯ್ಯ, ಕಲ್ಲೇಶಪ್ಪ  ಕಾವೇರಿ ನೀರಾವರಿ ನಿಗಮದ ಇಇ ಸಚ್ಚದಾನಂದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.