ADVERTISEMENT

ಅಭ್ಯರ್ಥಿ ಆಯ್ಕೆ; ಮುಂದುವರಿದ ಗೊಂದಲ

ಅರಸೀಕೆರೆ ವಿಧಾನಸಭಾ ಕ್ಷೇತ್ರ: ಬಿಜೆಪಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ

ಕೆ.ಎಸ್.ಸುನಿಲ್
Published 13 ಏಪ್ರಿಲ್ 2018, 11:14 IST
Last Updated 13 ಏಪ್ರಿಲ್ 2018, 11:14 IST

ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರಿದಿದೆ. ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ಅವರನ್ನು ಸ್ಥಳೀಯ ಮುಖಂಡರು ಭೇಟಿ ಮಾಡಿ ಬಂದರೂ ಘೋಷಣೆ ಮಾಡಿಲ್ಲ. ಹಾಗಾಗಿ, ಅಭ್ಯರ್ಥಿ ಆಯ್ಕೆ ಅನಿಶ್ಚಿತತೆ ಮುಂದುವರಿದಿದ್ದು, ಮುಖಂಡರು ಹಾಗೂ ಕಾರ್ಯಕರ್ತರನ್ನು ಚಿಂತೆಗೆ ದೂಡಿದೆ.

20 ದಿನದ ಹಿಂದೆ ಪುತ್ರ ಡಾ.ಅರುಣ್‌ರೊಂದಿಗೆ ಸೋಮಣ್ಣ ಕ್ಷೇತ್ರಕ್ಕೆ ಬಂದು, ಬಿಎಸ್‌ವೈ ಸೂಚನೆಯಂತೆ ಪುತ್ರನನ್ನು ಕಣಕ್ಕಿಳಿಸುತ್ತಿರುವುದಾಗಿ ಹೇಳಿ, ಪ್ರಚಾರ ನಡೆಸಿ ಸಂಚಲನ ಉಂಟು ಮಾಡಿದ್ದರು. ಇದೀಗ ಮೌನ ವಹಿಸಿರುವುದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಈ ನಡುವೆ ಮಾಜಿ ಶಾಸಕರಾದ ಎ.ಎಸ್‌.ಬಸವರಾಜ್‌, ಕೆ.ಪಿ.ಪ್ರಭುಕುಮಾರ್‌ ಸೇರಿದಂತೆ ಹಲವರು ಅರುಣ್ ಸ್ಪರ್ಧೆಗೆ ಅಪಸ್ವರ ತೆಗೆದು, ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು. ಹೊರಗಿನವರು ಕ್ಷೇತ್ರಕ್ಕೆ ಬಂದರೆ ಗೆಲುವು ಕಷ್ಟ ಎಂಬ ಮಾತು ಕೇಳಿ ಬಂದಿತು. ಇದರಿಂದ ಬೇಸತ್ತ ಸೋಮಣ್ಣ ಮತ್ತು ಅರುಣ್‌ ಕ್ಷೇತ್ರಕ್ಕೆ ಮರಳಲಿಲ್ಲ ಎಂದು ಹೇಳಲಾಗುತ್ತಿದೆ.

ADVERTISEMENT

ಇವರೊಂದಿಗೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿವಿಟಿ ಬಸವರಾಜು, ಮಾಜಿ ಶಾಸಕ ಕೆ.ಪಿ.ಪ್ರಭುಕುಮಾರ್‌ ಅವರ ಪುತ್ರ ವಿಜಯಪ್ರಭು, ಮುಖಂಡ ರಾಜ್‌ಕುಮಾರ್‌ ಅವರು ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

‘ನನ್ನನ್ನು ಸೇರಿದಂತೆ ಜಿವಿಟಿ ಬಸವರಾಜು, ಬಾಣಾವರದ ಜಯಣ್ಣ, ಬಿ.ಬಿ.ಗಂಗಾಧರ್‌ ಅವರು ಅರುಣ್‌ ಸೋಮಣ್ಣ ಅವರನ್ನೇ ಕಣಕ್ಕಿಳಿಸುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇವೆ. ಸ್ಥಳೀಯರಿಗೆ ಆದ್ಯತೆ ನೀಡಿದರೆ ಒಳ್ಳೆಯದು. ಇಲ್ಲದಿದ್ದರೆ ಪ್ರಭಾವಿ ವ್ಯಕ್ತಿಗೆ ಟಿಕೆಟ್‌ ಕೊಡಬೇಕು. ದೇವೇಗೌಡರ ಜತೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಅನಾರೋಗ್ಯ ಇರುವ ಕಾರಣ ನನಗೆ ಟಿಕೆಟ್‌ ಬೇಡ ಎಂದಿದ್ದೇನೆ. ಅರುಣ್‌ಗೆ ಅನುಭವ ಸಾಲದು. ಸೋಮಣ್ಣ ಚಾಣಕ್ಯ ಇದ್ದಂತೆ. ಅವರಿಗೆ ಹೋರಾಟ ಮಾಡುವುದು ಗೊತ್ತು. ಇಲ್ಲವಾದರೆ ಬೆಂಗಳೂರಿನ ಮರಿಸ್ವಾಮಿಗಾದರೂ ಟಿಕೆಟ್‌ ನೀಡಬಹುದು’ ಎಂದು ಮಾಜಿ ಶಾಸಕ ಎ.ಎಸ್‌.ಬಸವರಾಜು ಹೇಳಿದರು.

ಮಾಜಿ ಶಾಸಕ ಕೆ.ಪಿ.ಪ್ರಭುಕುಮಾರ್‌, ‘ಕ್ಷೇತ್ರದಲ್ಲಿ ನಾನೂ ಟಿಕೆಟ್‌ ಆಕಾಂಕ್ಷಿ. ವಯಸ್ಸಿನ ಕಾರಣಕ್ಕೆ ನಿರಾಕರಿಸಿದರೆ ನನ್ನ ಮಗನಿಗೆ ಟಿಕೆಟ್‌ ನೀಡುವಂತೆ ನಾಯಕರಲ್ಲಿ ಮನವಿ ಮಾಡಿದ್ದೇನೆ. 15–20 ದಿನದ ಹಿಂದೆ ಸೋಮಣ್ಣ ತಮ್ಮ ಮಗನೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಸ್ಥಳೀಯರಿಗೆ ಟಿಕೆಟ್‌ ನೀಡಿದರೆ ಗೆಲುವಿಗೆ ಅನುಕೂಲವಾಗುತ್ತದೆ. ಹೈಕಮಾಂಡ್‌ ಅಭ್ಯರ್ಥಿ ಹೆಸರು ಪ್ರಕಟಿಸಿದೆ ವಿಳಂಬ ಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಕಾಂಗ್ರೆಸ್‌ನಿಂದ ವಕೀಲ ಬಿ.ಎನ್‌.ರವಿ, ಜಿ.ಎಸ್‌.ಬಸವರಾಜು ಅವರ ಪುತ್ರ ಶಶಿಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶಿವಪ್ಪ ಗೊಲ್ಲರಹಳ್ಳಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಮಲ್ಲೇನಹಳ್ಳಿ ಶಿವಶಂಕರ್‌ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್‌.ಅಶೋಕ್‌ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ.

ಕುರುಬ ಸಮುದಾಯದ ಅಶೋಕ್‌, ಶಿವಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೆಚ್ಚಿಕೊಂಡಿದ್ದರೆ, ವೀರಶೈವ ಲಿಂಗಾಯತ ಸಮುದಾಯದ ಶಶಿಧರ್‌, ಬಿ.ಎನ್‌. ರವಿ ಅವರು ಸಚಿವ ಎ.ಮಂಜು ಮೂಲಕ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಲುವಾಗಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಬಾಣಾವರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಬಿ.ಎಸ್.ಅಶೋಕ್‌ ಅವರು ಇತ್ತೀಚೆಗೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಜೆಡಿಎಸ್‌ ನಿಂದ ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಈಗಾಗಲೇ ಎರಡು ಸುತ್ತಿನ ಪ್ರಚಾರವನ್ನು ಪೂರ್ಣಗೊಳಿಸಿದ್ದಾರೆ.

ಬಿ.ಶಿವರಾಮು ಅತಂತ್ರ

ಬೇಲೂರು ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಅವರಿಗೆ ಹಿನ್ನಡೆಯಾಗಿದೆ. ಅನಾರೋಗ್ಯದಿಂದ ಶಾಸಕ ರುದ್ರೇಶ್‌ಗೌಡ ನಿಧನದ ಬಳಿಕ ರಾಜಕೀಯ ಲೆಕ್ಕಾಚಾರ ಸ್ವಲ್ಪ ಬದಲಾಗಿದೆ. ಬೇಲೂರು ಕ್ಷೇತ್ರದಲ್ಲಿ ರುದ್ರೇಶ್‌ಗೌಡರ ಪತ್ನಿ ಕೀರ್ತನಾ ಇಲ್ಲವೇ ಅವರ ಸಹೋದರ ವೈ.ಎನ್‌.ಕೃಷ್ಣಕುಮಾರ್‌ಗೆ ಟಿಕೆಟ್‌ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಆದರೂ ಶಿವರಾಮು ತಮ್ಮ ಬೆಂಬಲಿಗರೊಂದಿಗೆ ದೆಹಲಿಯಲ್ಲಿ ಬೀಡು ಬಿಟ್ಟು ಟಿಕೆಟ್‌ಗಾಗಿ ಲಾಬಿ ಮುಂದುವರಿಸಿದ್ದರು. ಆದರೆ, ಸಕಾರಾತ್ಮಕ ಸ್ಪಂದನೆ ದೊರೆಯದ ಕಾರಣ ಅವರು ಅರಸೀಕೆರೆಯಿಂದ ಸ್ಪರ್ಧಿಸಬೇಕೊ ಅಥವಾ ಕಣದಿಂದ ಹೊರಗುಳಿಯಬೇಕೊ ಎನ್ನುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ವರ್ಷದಿಂದ ತಾವು ಬೇಲೂರಿನಲ್ಲಿ ಸಂಘಟನೆಯಲ್ಲಿ ತೊಡಗಿದ್ದರಿಂದ ಅರಸೀಕೆರೆಯಿಂದ ಸ್ಪರ್ಧಿಸಿದರೆ ಅನುಕೂಲವಾಗುವುದಿಲ್ಲ ಎಂಬ ಭಾವನೆ ಹೊಂದಿದ್ದಾರೆ. ಹಾಗಾಗಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

**

ಎರಡು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಈಗಾಗಲೇ ಎರಡು ಸುತ್ತಿನ ಪ್ರಚಾರ ಮುಗಿಸಿದ್ದೇನೆ – ಕೆ.ಎಂ.ಶಿವಲಿಂಗೇಗೌಡ, ಜೆಡಿಎಸ್‌ ಅಭ್ಯರ್ಥಿ.

**

ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ವರಿಷ್ಠರು ಟಿಕೆಟ್‌ ನೀಡುವ ಭರವಸೆ ಇದೆ – ಬಿ.ಎಸ್‌.ಅಶೋಕ್‌, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ.

**

ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ರಾಜ್ಯ ನಾಯಕರು ಸೂಚಿಸಿದರೆ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ – ಅರುಣ್‌ ಸೋಮಣ್ಣ, ಬಿಜೆಪಿ ಟಿಕಟ್‌ ಆಕಾಂಕ್ಷಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.