ADVERTISEMENT

‘ಅಮೃತ್‌’: ಡಿಸೆಂಬರ್‌ಗೆ ಪೂರ್ಣ

ನೀರು ಪೂರೈಕೆ ಯೋಜನೆ: ಕಾಮಗಾರಿ ಸ್ಥಳಕ್ಕೆ ಶಾಸಕ ಪ್ರೀತಂ ಜೆ.ಗೌಡ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 11:37 IST
Last Updated 12 ಜೂನ್ 2018, 11:37 IST

ಹಾಸನ: ನಗರಕ್ಕೆ ಗೊರೂರು ಹೇಮಾವತಿ ಜಲಾಶಯದಿಂದ 24/7 ಕುಡಿಯುವ ನೀರು ಪೂರೈಸುವ ಅಮೃತ್ ಯೋಜನೆ ಕಾಮಗಾರಿ ಸ್ಥಳಕ್ಕೆ ಶಾಸಕ ಪ್ರೀತಂ ಜೆ.ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೊರೂರಿನ ಜಾಕ್ವೆಲ್ ಕಾಮಗಾರಿ ಹಾಗೂ ನಗರದವರೆಗಿನ ಪೈಪ್ ಅಳವಡಿಕೆ ಪ್ರಗತಿ ವೀಕ್ಷಿಸಿದ ನಂತರ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿ, ನಗರಸಭೆ ಪೌರಾಯುಕ್ತ ಅವರಿಂದ ಯೋಜನೆ ಬಗ್ಗೆ ಸಮಗ್ರ ಮಾಹಿತಿ ಪಡೆದರು.

ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಟರಾಜ್, ‘ಗೊರೂರಿನ ಜಾಕ್ವೆಲ್ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ.

ADVERTISEMENT

34 ಕಿ.ಮೀ. ಉದ್ದಕ್ಕೆ ಪೈಪ್ ಅಳವಡಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಆದರೆ ಅಲ್ಲಲ್ಲಿ ಅರಣ್ಯ ಭೂಮಿಯಲ್ಲಿ ಕಾಮಗಾರಿ ನಡೆಸಲು ಆಗುತ್ತಿಲ್ಲ. ಕೆಲವೆಡೆ ಪೈಪ್ ಹೂಳಲು ಭೂ ಮಾಲೀಕರು ಬಿಡುತ್ತಿಲ್ಲ. ರೈತರು ಕೇಳುವಷ್ಟು ಭೂ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದ ಕೆಲಸ ಪೂರ್ಣಗೊಳಿಸಲು ಆಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇದಕ್ಕೆ ಪ್ರೀತಂ ಜೆ.ಗೌಡ, ‘ಈಗಾಗಲೇ ಕಾಮಗಾರಿ ಆರಂಭವಾಗಿ ಎರಡು ವರ್ಷವಾಗುತ್ತಿದೆ. ಡಿಸೆಂಬರ್‌ವರೆಗೂ ಜಾಕ್ವೆಲ್ ಕಾಮಗಾರಿ ಪೂರ್ಣಗೊಳ್ಳಲು ಕಾಯಲು ಆಗುವುದಿಲ್ಲ. ಶೀಘ್ರವಾಗಿ ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸಬೇಕು’  ಎಂದು ಹೇಳಿದರು.

‘ಭೂ ಮಾಲೀಕರಿಗೆ ಪರಿಹಾರ ನಿಗದಿ ಮಾಡುವ ಸಂಬಂಧ ನಗರಸಭೆ ಆಯುಕ್ತರೊಂದಿಗೆ ಮಾತುಕತೆ ನಡೆಸುತ್ತೇನೆ. ಅರಣ್ಯ ಭೂಮಿಯಲ್ಲಿ ಕಾಮಗಾರಿಗೆ ಅವಕಾಶ ದೊರಕಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ನಗರಕ್ಕೆ 24/7 ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರ ಈ ಯೋಜನೆಗೆ ಮಂಜೂರಾತಿ ನೀಡಿದೆ. ಅದನ್ನು ಬಳಸಿಕೊಂಡು ನೀರಿನ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದರು. ನಗರಸಭೆ ಹಾಗೂ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.