ADVERTISEMENT

ಅರಕಲಗೂಡು: ಚಿರತೆ ದಾಳಿಗೆ ಎರಡು ಹಸು ಬಲಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 8:25 IST
Last Updated 15 ಮಾರ್ಚ್ 2012, 8:25 IST

ರಕಲಗೂಡು: ತಾಲ್ಲೂಕಿನಲ್ಲಿ ಮತ್ತೆ ಚಿರತೆ ಹಾವಳಿ ಮತ್ತೆ ಕಾಣಿಸಿಕೊಂಡಿದ್ದು, ಎರಡು ಗಬ್ಬದ ಹಸುಗಳು ಬಲಿಯಾಗಿವೆ.

ತಾಲ್ಲೂಕಿನ ಕಣಿಯಾರು ಕೊಪ್ಪಲು ಗ್ರಾಮದ ಕೃಷ್ಣಮೂರ್ತಿ ಎಂಬುವವರ ಎರಡು ಮಿಶ್ರತಳಿ ಹಸುಗಳನ್ನು ಚಿರತೆ ಕೊಂದು ಹಾಕಿದೆ. ಎರಡು ದಿನಗಳ ಹಿಂದೆ ಮೇಯಲು ಬಿಟ್ಟಿದ್ದ ಹಸು ಮನೆಗೆ ವಾಪಸ್ಸಾಗಿರಲಿಲ್ಲ. ಮನೆಯವರು ತೀವ್ರ ಹುಡುಕಾಟ ನಡೆಸಿದ್ದರು.

ಬುಧವಾರ ಬೆಳಿಗ್ಗೆ ಮೇಯಲು ತೆರಳಿದ ಇನ್ನೊಂದು ಹಸು ಗ್ರಾಮದ ಹೊರವಲಯದಲ್ಲಿ  ಸತ್ತು ಬಿದ್ದಿರುವ ವಿಷಯ ತಿಳಿಯಿತು. ಕುಟುಂಬದವರು ಸ್ಥಳಕ್ಕೆ ತೆರಳಿ ಹುಟುಕಾಟ ನಡೆಸಿದಾಗ ಎರಡು ದಿನದ ಹಿಂದೆ ಕಾಣೆಯಾಗಿದ್ದ ಹಸುವಿನ ಕಳೇಬರವೂ ಸಹ ಸ್ವಲ್ಪ ದೂರದಲ್ಲಿಯೇ ಸಿಕ್ಕಿತು.

ಘಟನೆಯಿಂದ ಗ್ರಾಮಸ್ಥರು ತೀವ್ರ ಭೀತಿಗೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಕೊಟ್ಟಿಗೆಗೆ ನುಗ್ಗಿದ ಚಿರತೆ: ಹಸುವಿಗೆ ಗಾಯ
ಹಿರೀಸಾವೆ: ತೋಟದಲ್ಲಿರುವ ಕೊಟ್ಟಿಗೆಗೆ ಚಿರತೆ ನುಗ್ಗಿ ಒಂದು ಹಸು ಹಾಗೂ ಒಂದು ಕರುವಿಗೆ ಗಾಯ ಮಾಡಿದ್ದು, ಮತ್ತೊಂದು ಕರುವನ್ನು ಎಳೆದುಕೊಂಡು ಹೋದ ಘಟನೆ ಹೋಬಳಿಯ ಜಿನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಧರಣಿಚನ್ನೇಗೌಡರ ಮಗ ರಾಮೇಗೌಡ ಅವರು ಸಾಕಿದ ಕರುವನ್ನು ಎಳೆದುಕೊಂಡು ಹೋಗಿರುವುದು ಎಂದು ತಿಳಿದು ಬಂದಿದೆ.

ರಾಮೇ ಗೌಡರು  ತೋಟದ ಕೊಟ್ಟಿಗೆಯಲ್ಲಿ ಎಚ್‌ಎಫ್ ತಳಿಯ ಒಂದು ದೊಡ್ಡ ಹಸು ಹಾಗೂ ಎರಡು ಚಿಕ್ಕ ಕರುಗಳನ್ನು ಸಾಕಿದ್ದಾರೆ. ರಾತ್ರಿ ಹುಲ್ಲು ಹಾಕಲು ಕೊಟ್ಟಿಗೆಗೆ ಬಂದಾಗ ಎರಡು ತಿಂಗಳ ಕರು ಕಾಣೆಯಾಗಿತ್ತು. ಬೆಳಿಗ್ಗೆ ಹಸುಗಳನ್ನು ಹೊರಗೆ ಕಟ್ಟಲು ಹೊದಾಗ ಎರಡು ರಾಸುಗಳ ಕುತ್ತಿಗೆಯಲ್ಲಿ ಗಾಯವಾಗಿ ರಕ್ತ ಸೊರಿರುವುದು ಪತ್ತೆಯಾಗಿದೆ, ಪಶುಚಿಕಿತ್ಸಾ ಕೇಂದ್ರದ ವೈದ್ಯರಿಗೆ ತೋರಿಸಿದಾಗ ಇದು ಚಿರತೆ ದಾಳಿ ಮಾಡಿದಾಗ ಉಂಟಾಗಿರುವ ಗಾಯ ಎಂದು ತಿಳಿಸಿದ್ದಾರೆ. ಕಾಣೆಯಾದ ಕರು ಇದುವರೆಗೆ ಪತ್ತೆಯಾಗಿಲ್ಲ ಎಂದು ರೈತರು ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.