ADVERTISEMENT

ಅರಕಲಗೂಡು: ಮತದಾನ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 5:58 IST
Last Updated 4 ಏಪ್ರಿಲ್ 2013, 5:58 IST

ಅರಕಲಗೂಡು: ಮತದಾನ ಪವಿತ್ರ ಕರ್ತವ್ಯವಾಗಿದ್ದು ಎಲ್ಲರೂ ಕಡ್ಡಾಯವಾಗಿ ಮತ ಚಲಾವಣೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕು ಎಂದು ಪ್ರೊಬೇಷನರಿ ಉಪವಿಭಾಗಾಧಿಕಾರಿ ಸುನಿಲ್‌ಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಮತದಾರರ ಜಾಗೃತಿ ಆಂದೋಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮತದಾನದ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಆಂದೋಲನವನ್ನು ಚುನಾವಣಾ ಆಯೋಗ ಹಮ್ಮಿಕೊಂಡಿದೆ ಎಂದರು.

ತಹಶೀಲ್ದಾರ್ ಜಗದೀಶ್ ಮಾತನಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ಕೈಬಿಡುವುದು, ತಪ್ಪುಗಳ ತಿದ್ದುಪಡಿ ಮುಂತಾದ ಕಾರ್ಯಗಳನ್ನು ಗ್ರಾಮೀಣ ಪ್ರದೇಶದ ಅಂಗನವಾಡಿ ಶಿಕ್ಷಕಿ, ಗಾಮ ಪಂಚಾಯಿತಿ ಬಿಲ್ ಕಲೆಕ್ಟರ್‌ಗಳ ಸಹಾಯದಿಂದ ಸ್ಥಳೀಯವಾಗಿಯೇ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಗ್ರಾಮೀಣ ಜನರು ಇದರ ಉಪಯೋಗ ಪಡೆದು ಮತದಾನದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಹಾಸನದ ಬಿ.ಟಿ. ಮಾನವ ಕಲಾ ತಂಡದವರು ಹಾಡು ಹಾಗೂ ಬೀದಿ ನಾಟಕದ ಮೂಲಕ ಮತದಾನದ ಮಹತ್ವ ಕುರಿತು ಜನರಿಗೆ ಮನವರಿಕೆ ಮಾಡಿದರು.

ಮಹಿಳಾ ಮತದಾರರ ಸಂಖ್ಯೆ ಕಡಿಮೆ: ಕಳವಳ
ಅರಕಲಗೂಡು ತಾಲ್ಲೂಕಿನ ಕೆಲವು ಮತಗಟ್ಟೆಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಕಡಿಮೆ ಇರುವುದು ಕಳವಳಕಾರಿಯಾಗಿದೆ ಎಂದು ಪ್ರೊಬೇಷನರಿ ಉಪವಿಭಾಗಾಧಿಕಾರಿ ಸುನೀಲ್‌ಕುಮಾರ್ ತಿಳಿಸಿದರು.

ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು ಜನಗಣತಿಯಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಆದರೆ ಮತದಾರರ ಪಟ್ಟಿಯಲ್ಲಿ  ನಿಗದಿಗಿಂತ ಕಡಿಮೆ ಸಂಖ್ಯೆಯಲ್ಲಿರುವುದು ಸೋಜಿಗ ಎನಿಸಿದೆ. ಮತಗಟ್ಟೆಯೊಂದರ ವ್ಯಾಪ್ತಿಯಲ್ಲಿ ಒಂದು ಸಾವಿರ ಪುರುಷರು ಹಾಗೂ ಸಾವಿರದ ಐದುಜನ ಮಹಿಳೆಯರು ಇದ್ದಾರೆ. ಆದರೆ ಮತದಾರರ ಪಟ್ಟಿಯಲ್ಲಿ 980 ಮಂದಿ ಪುರುಷರು ಇದ್ದರೆ ಮಹಿಳೆಯರು 923 ಮಂದಿ ಇದ್ದಾರೆ.

ಈ ರೀತಿಯ ವ್ಯತ್ಯಾಸ ಹಲವು ಮತಗಟ್ಟೆಗಳಲ್ಲಿ ಇದ್ದು ಇದರ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಜಿಲ್ಲೆಯಲ್ಲಿ ಈ ತಾಲ್ಲೂಕಿನಲ್ಲಿ ಮಾತ್ರ ಈ ರೀತಿ ವ್ಯತ್ಯಾಸ ಕಂಡುಬಂದಿದ್ದು ಈ ಕುರಿತು ಗಮನ ಹರಿಸುವಂತೆ ಚುನಾವಣಾ ಆಯೋಗ ಸಹ ಸೂಚನೆ ನೀಡಿದೆ ಎಂದರು. ಮಹಿಳಾ ಮತದಾರರಲ್ಲಿನ ಜಾಗೃತಿ ಕೊರತೆ ಇದಕ್ಕೆ ಕಾರಣ ಇರಬಹುದು ಎಂಬ ಸಂಶಯವಿದ್ದು ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

ಚುನಾವಣೆ ಸಾಕ್ಷ್ಯಚಿತ್ರ ಪ್ರದರ್ಶನ
ಆಲೂರು ವರದಿ: ಚುನಾವಣೆ ಪ್ರಕ್ರಿಯೆ ಕುರಿತ ವಿವರಣಾತ್ಮಕ ಸಾಕ್ಷಚಿತ್ರಗಳನ್ನು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಪ್ರದರ್ಶಿಸಲಾಯಿತು.

ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು, ಮತದಾನದ ಮಹತ್ವದ ಕುರಿತು ಮಾಹಿತಿ ನಿಡಲಾಯಿತು. ಪ್ರಾಮಾಣಿಕವಾಗಿ ಮತದಾನ ಮಾಡುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.

ಪ್ರಾಂಶುಪಾಲ ಸಿ.ಬಿ.ಚಂದ್ರಪ್ಪ ಮಾತನಾಡಿ, ಯುವಪೀಳಿಗೆ ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಮತದಾರರ ಪಟ್ಟಿಗೆ ಹೊಸದಾಗಿ ಸೇರಲು ಬಯಸುವವರು ಏಪ್ರಿಲ್ 7ರೊಳಗೆ ತಹಶೀಲ್ದಾರ್ ಕಚೇರಿಯಲ್ಲಿ ನಮೂನೆ 6 ಪಡೆದು ಅರ್ಜಿ ಸಲ್ಲಿಸಬಹುದು. ನೋಂದಣಿ ಮಾಡಿಸಿರುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಜಗದೀಶ್ ಪ್ರಾಸ್ತಾವಿಕವಾಗಿ ಮಾತಾಡಿದರು. ಹರೀಶ್ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.