ADVERTISEMENT

ಆಯುರ್ವೇದ ಈಗ ವಿಶ್ವಮಾನ್ಯ: ಡಾ.ಜಯಶ್ರೀ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:36 IST
Last Updated 25 ಸೆಪ್ಟೆಂಬರ್ 2013, 8:36 IST

ಹಾಸನ: ‘ಆಯುರ್ವೇದ ಈಗ ವಿಶ್ವ­ಮಾನ್ಯ­ವಾಗುತ್ತಿದೆ. ಈ ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಯುವ ವೈದ್ಯರು ಕೇವಲ ಮಹಾವಿದ್ಯಾಲಯಗಳಲ್ಲಿ ಬೋಧಕ­ರಾಗಲು ಬಯಸುತ್ತಾರೆ. ಆರೋಗ್ಯ ವಲಯದಲ್ಲಿ ಅನೇಕ ಅವಕಾಶಗಳಿದ್ದು, ಯುವ ವೈದ್ಯರು ಅವುಗಳನ್ನು ಬಳಸಿ­ಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳ­ಬೇಕು’ ಎಂದು ವಿಜಾಪುರದ ಬಿ.ಎಲ್.ಡಿ ಆಯುರ್ವೇದ ಮಹಾವಿದ್ಯಾಲಯದ ನಿರ್ದೇಶಕಿ ಡಾ. ಕೆ.ಎಸ್. ಜಯಶ್ರೀ ಸಲಹೆ ನೀಡಿದರು.

ಹಾಸನದ ಧರ್ಮಸ್ಥಳ ಮಂಜು ನಾಥೇಶ್ವರ ಆಯುರ್ವೇದ ಕಾಲೇಜಿ­ನಲ್ಲಿ ಉಡುಪಿ ಮತ್ತು ಹಾಸನದ ಎಸ್.ಡಿ.ಎಂ ಮಹಾ­ವಿದ್ಯಾಲಯ­ಗಳ ದ್ರವ್ಯಗುಣ ಸ್ನಾತ­ಕೋತ್ತರ ವಿಭಾಗಗಳ ಸಹಯೋಗ­ದಲ್ಲಿ ಆಯೋಜಿಸಿರುವ ‘ಪ್ರಾಣವಹ ಸ್ರೋತೋವಿಕಾರಗಳಲ್ಲಿ ಔಷಧ ಪ್ರಯೋಗ’ ಕುರಿತ 2 ದಿನಗಳ ರಾಷ್ಟ್ರ­ಮಟ್ಟ­ದ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್, ‘ದೇಶದಲ್ಲಿ ಆಯುರ್ವೇದ ಸ್ನಾತ­ಕೋತ್ತರ ಪದವಿ ಪಡೆದ ವೈದ್ಯರ ಸಂಖ್ಯೆ ತೀರ ಕಡಿಮೆ. ಯುವ ವೈದ್ಯರು ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿ­ಕೊಂಡರೆ ಆರೋಗ್ಯ ವಲಯದಲ್ಲಿ ಯಶಸ್ಸು ಕಾಣಬಹುದು’ ಎಂದರು.

ಕೊಯಂಬತ್ತೂರಿನ ಎ.ವಿ.ಪಿ ಆಯುರ್ವೇದ ಪ್ರತಿಷ್ಠಾನದ ಸಂಶೋಧನಾಧಿ­ಕಾರಿ ಡಾ. ಪಿ ರಾಮಮನೋಹರ್, ಶಿವಮೊಗ್ಗದ ಬಾಪೂಜಿ ಆಯುರ್ವೇದ ಮಹಾ­ವಿದ್ಯಾಲಯದ ಪ್ರಾಂಶುಪಾಲ ಡಾ. ಎಂ. ಬಿ ಗುರುರಾಜ್, ಸುಳ್ಯದ ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯದ ಡಾ. ಲೀಲಾಧರ್, ಮೂಡಬಿದ್ರೆ ಆಳ್ವಾಸ್ ಆಯುರ್ವೇದ ಕಾಲೇಜಿನ  ಪ್ರಾಂಶುಪಾಲ ಡಾ. ವಿನಯಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿಯ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಡಾ. ಶ್ರೀಧರ್ ಬಾಯರಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಾಗಾರದಲ್ಲಿ ದೇಶದ ನಾನಾ ರಾಜ್ಯಗಳಿಂದ 175 ಆಯುರ್ವೇದ ಸ್ನಾತಕೋತ್ತರ ವಿಭಾಗದ ಯುವ ವೈದ್ಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಪಾಲ್ಗೊಂಡಿದ್ದಾರೆ.

ಶ್ರುತಿ ಶರ್ಮಾ ಹಾಗೂ ವೃಂದ ದವರು ಧನ್ವಂತರಿ ಪ್ರಾರ್ಥನೆ ನಡೆಸಿ ಕೊಟ್ಟರು. ಶೈಕ್ಷಣಿಕ ವಿಭಾಗದ ಡೀನ್ ಡಾ. ಮಲ್ಲಿಕಾ ಕೆ.ಜೆ ಸ್ವಾಗತಿಸಿದರು ಡಾ. ಹರಿಣಿ ನಿರೂಪಿಸಿ, ಈ ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ. ಪ್ರಕಾಶ್ ಹೆಗಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.