ADVERTISEMENT

ಆರೋಪ ಸಾಬೀತಾದರೆ ರಾಜೀನಾಮೆ: ಶಾಸಕ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 6:29 IST
Last Updated 23 ಸೆಪ್ಟೆಂಬರ್ 2013, 6:29 IST

ಹಾಸನ: ‘ದುದ್ದ ರಸ್ತೆ ಹೆಸರಿನಲ್ಲಿ ಅರಸೀಕೆರೆ ತಾಲ್ಲೂಕಿನಿಂದ ಜಲ್ಲಿ ತೆಗೆದು ಬೇರೆ ರಸ್ತೆಗಳಿಗೆ ಸಾಗಿಸಿರುವುದಕ್ಕೆ ದಾಖಲೆಗಳಿವೆ. ಈ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ನಾನು ಒತ್ತಾಯಿಸುತ್ತೇನೆ. ಅಕ್ರಮದಲ್ಲಿ ನನ್ನ ಪಾತ್ರ ಇರುವುದು ಸಾಬೀತಾದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಶಿವಲಿಂಗೇಗೌಡರೇ ತಮ್ಮ ಪ್ರಭಾವ ಬೀರಿ ಜಲ್ಲಿ ಬೇರೆಡೆ ಮಾರಾಟ ಮಾಡಿಸಲು ಸಹಕಾರ ಮಾಡಿದ್ದಾರೆ ಎಂದು ಈಚೆಗೆ ಕಾಂಗ್ರೆಸ್‌ ಮುಖಂಡರು ಆರೋಪ ಮಾಡಿದ್ದರು. ಶನಿವಾರ ಪತ್ರಿಕಾಗೋಷ್ಠಿ­ಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಲಿಂಗೇಗೌಡ, ‘ನನ್ನ ಪಾತ್ರ ಇಲ್ಲ ಎಂದು ಸಾಬೀತಾದರೆ ಆರೋಪ ಮಾಡಿದವರು ರಾಜಕೀಯದಿಂದ ನಿವೃತ್ತಿ ಪಡೆಯ­ಬೇಕು’ ಎಂದು ಸವಾಲೆಸೆದರು.

‘ದುದ್ದ ರಸ್ತೆಯ ಗುತ್ತಿಗೆ ಪಡೆದ ಅಭಿಜಿತ್‌ ಕಂಪೆನಿಯ­ವರು ನಷ್ಟ ಅನುಭವಿಸಿದ ಹಿನ್ನೆಲೆ ಯಲ್ಲಿ ರಸ್ತೆ ನಿರ್ಮಾಣದಿಂದ ಹಿಂದೆ ಸರಿದರು. ತಮಗಾದ ನಷ್ಟ­ವನ್ನು ಹೊಂದಿಸುವ ಉದ್ದೇಶ­ದಿಂದ ಅವರು ಅಕ್ರಮವಾಗಿ ಹೇಮಂತ್‌ ಎಂಬುವವರಿಗೆ 66 ಲಕ್ಷ ರೂಪಾಯಿಗೆ ಜಲ್ಲಿ ಕ್ವಾರಿಯನ್ನು ಮಾರಾಟ ಮಾಡಿದ್ದರು. ಈ ಬಗ್ಗೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ. ಹೇಮಂತ್‌ ಎಂಬುವವರು ಲ್ಯಾಂಡ್‌ ಆರ್ಮಿಯವರಿಗೆ ಜಲ್ಲಿ ಮಾರಾಟ ಮಾಡಿದ್ದಾರೆ.

ಈ ಜಲ್ಲಿ ಬಳಸಿ ನನ್ನ ಕ್ಷೇತ್ರದಲ್ಲಿರುವ ಐದು ಸುವರ್ಣ ಗ್ರಾಮಗಳಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದೆ. ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆದಿರುವ ಮಾತ್ರಕ್ಕೆ ನಾನೇ ಆರೋಪಿ ಎಂದು ಕಾಂಗ್ರೆಸ್‌ನವರು ವಾದಿಸುತ್ತಿದ್ದಾರೆ. ಕಂಪೆನಿಯವರು ಅಥವಾ ಹೇಮಂತ್‌ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಹೊಟ್ಟೆಕಿಚ್ಚಿನಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ಶಿವಲಿಂಗೇಗೌಡ ಆರೋಪಿಸಿದರು.

‘ಸಕಾಲದಲ್ಲಿ ಕಾಮಗಾರಿ ಮಾಡದಿದ್ದರೆ ದಂಡ ವಿಧಿಸುವ ಅಧಿಕಾರ ಸರ್ಕಾರಕ್ಕೆ ಇರುತ್ತದೆಯೇ ವಿನಃ ಶಾಸಕನಿಗೆ ಅಲ್ಲ. ವಿರೋಧ ಪಕ್ಷದವರ ಮಾತು ಕೇಳಿ ಅವರು ದಂಡ ರದ್ದು ಮಾಡುತ್ತಾರೆಯೇ? ರಸ್ತೆ ಬಗ್ಗೆ ಕಾಳಜಿ ಇದ್ದರೆ ಮೊದಲು ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಲಿ ಅಥವಾ ಕಂಪೆನಿಯವರನ್ನೂ ಕರೆಸಿ ಮಾತುಕತೆಯ ಮೂಲಕ ರಸ್ತೆ ಪೂರ್ಣಗೊಳಿಸಲು ಉಪಾಯ ಹುಡುಕಲಿ’ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿ ಚೌಡಯ್ಯ ಹಾಗೂ ಮಾಜಿ ಅಧ್ಯಕ್ಷ ಹುಚ್ಚೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.