ADVERTISEMENT

ಇಂದ್ರಧ್ವಜ ಆರಾಧನಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:39 IST
Last Updated 22 ಅಕ್ಟೋಬರ್ 2017, 5:39 IST

ಶ್ರವಣಬೆಳಗೊಳ: ಬಾಹುಬಲಿ ಮಹಾ ಮಸ್ತಕಾಭಿಷೇಕದ ಅಂಗವಾಗಿ ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಇಂದ್ರಧ್ವಜ ಮಹಾ ಮಂಡಲ ಆರಾಧನಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಮುಂಭಾಗದಲ್ಲಿ 458 ಜಿನ ಬಿಂಬಗಳ ಪ್ರತಿಷ್ಟಾಪನೆ ಮಾಡಿ, ಶುದ್ಧಿ ಮತ್ತು ಲಘು ಪಂಚಕಲ್ಯಾಣ ವಿಧಿಯ ಸಕಲ ಧಾರ್ಮಿಕ ವಿಧಿ ವಿಧಾನಗಳನ್ನು ಆಚಾರ್ಯ ವರ್ಧಮಾನ ಸಾಗರ ಮಹಾರಾಜರು, ವಾಸುಪೂಜ್ಯ ಸಾಗರ ಮಹಾರಾಜರು, ಚಂದ್ರಪ್ರಭ ಸಾಗರ ಮಹಾರಾಜರು, ಪಂಚಕಲ್ಯಾಣ ಸಾಗರ ಮಹಾರಾಜರು, ಸಂಘಸ್ಥ ತ್ಯಾಗಿಗಳು ಮತ್ತು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಮಂಡಲದ ರಚನಾ ವಿನ್ಯಾಸದಲ್ಲಿ 458 ಮಂಟಪ, 458 ಮೂರ್ತಿಗಳು ಹಾಗೂ ಶಾಸ್ತ್ರೋಕ್ತವಾದ 5 ಮೇರು ಪರ್ವತಗಳ ರಚನೆ ಮಾಡಲಾಗಿದೆ. ಮುಂದೆಯೂ ಕೂಡ ಇಂತಹ ಆರಾಧನೆ ಕ್ಷೇತ್ರದಲ್ಲಿ ಯಾವಾಗಲೂ ನಡೆಯುತ್ತಿರಬೇಕೆಂಬ ಉದ್ದೇಶದಿಂದ ಶಾಶ್ವತ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಅ. 22ರಂದು ಘಟಯಾತ್ರೆ, 23 ಕ್ಕೆ ಮೃತ್ತಿಕಾ ಸಂಗ್ರಹ, 24 ಕ್ಕೆ ಅಂಕುರಾರ್ಪಣೆ, 25 ಕ್ಕೆ ದೇವಾಗಮ ವಿಧಿ – ಜಪಾನಷ್ಠಾನ, 26ರಂದು ಇಂದ್ರ ಪ್ರತಿಷ್ಠೆ, 27ರಿಂದ ನ. 4ರವರೆಗೆ ಬೆಳಿಗ್ಗೆ 7 ಗಂಟೆಗೆ ಪೂಜೆ, ಮಧ್ಯಾಹ್ನ 12.30 ರಿಂದ ಇಂದ್ರಧ್ವಜ ಮಹಾ ಮಂಡಲಾರಾಧನೆ. ಸಂಜೆ 6 ರಿಂದ ಮಂಗಳಾರತಿ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ .5ರಂದು ಮಧ್ಯಾಹ್ನ 12.30 ರಿಂದ ವಿಶ್ವ ಶಾಂತಿ ಹವನ ಮತ್ತು ಭವ್ಯ ರಥ ಯಾತ್ರೆ ಸಮಾರೋಪ ಸಮಾರಂಭ ಹಾಗೂ ತ್ಯಾಗಿಗಳಿಂದ ಪ್ರವಚನ ಏರ್ಪಡಿಸಲಾಗಿದೆ ಎಂದು ಹೇಳಿದರು.

ಚಾತುರ್ಮಾಸ್ಯ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಪ್ರಕಾಶ್ ಚಂದ್‌ಜೈನ್ ಬಡಜಾತ್ಯ, ಸಂತೋಷದೇವಿ ಜೈನ್, ಬಡಜಾತ್ಯ ಸೌಧರ್ಮ ಇಂದ್ರ ಇಂದ್ರಾಣಿಯಾಗಿ ಪಾಲ್ಗೊಳ್ಳಲಿದ್ದಾರೆ. ಆರಾಧನೆಯನ್ನು ಪ್ರತಿಷ್ಟಾಚಾರ್ಯ ಕುಮದ್‌ಚಂದ್‌ ಸೋನಿ, ಶ್ರವಣಬೆಳಗೊಳದ ಡಿ.ಪಾರ್ಶ್ವನಾಥ್‌ ಶಾಸ್ತ್ರೀ, ಎಸ್‌.ಡಿ.ನಂದಕುಮಾರ್‌, ಎಸ್‌.ಪಿ.ಉದಯ್‌ಕುಮಾರ್‌ ಶಾಸ್ತ್ರೀ ನೆರವೇರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.