ADVERTISEMENT

ಇನ್ನೂ ಸೌಕರ್ಯ ಕಾಣದ ಸೋಂಪುರ

ರವಿ ಬೆಟ್ಟಸೋಗೆ
Published 14 ನವೆಂಬರ್ 2012, 7:45 IST
Last Updated 14 ನವೆಂಬರ್ 2012, 7:45 IST

ರಾಮನಾಥಪುರ: ದಲಿತರು, ಹಿಂದುಳಿದ ವರ್ಗದವರು ವಾಸವಿರುವ ಸೋಂಪುರ ಗ್ರಾಮ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿ ಹೋಗಿದೆ.

ಲಕ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮವು ಕ್ಷೇತ್ರದ ಶಾಸಕ ಎ. ಮಂಜು ಅವರ ಸ್ವಗ್ರಾಮ ಸಮೀಪವೇ ಇದ್ದರೂ ಅಭಿವೃದ್ದಿಯಿಂದ ಮಾತ್ರ ಬಲು ದೂರ. ಊರ ಒಳಹೊಕ್ಕು ಎತ್ತ ನೋಡಿದರೂ ಸಮಸ್ಯೆಗಳೇ ಕಣ್ಣಿಗೆ ರಾಚುತ್ತವೆ.

ಊರು ಸಮಸ್ಯೆಗಳ ಸರಮಾಲೆಯನ್ನೇ ಹಾಸು ಹೊದ್ದು ಮಲಗಿದೆ. ಸೋಂಪುರದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಕುರುಬ ಸಮಾಜದ ಸುಮಾರು 230 ಕುಟುಂಬಗಳು ವಾಸವಾಗಿದೆ. ಸಾಲು ಸಾಲಾಗಿ ನಿರ್ಮಾಣಗೊಂಡಿರುವ ಹಳೆಯ ಕಾಲದ ವಾಸದ ಮನೆಗಳ ಮುಂಭಾಗದ ಓಣಿಗಳೆಲ್ಲ ಕಲ್ಲು- ದೂಳು ಮಣಿನಿಂದ ಕೂಡಿವೆ.

ಇದುವರೆಗೆ ಒಮ್ಮೆಯೂ ಡಾಂಬರು ಕಾಣದ ಕಾರಣ ಮಳೆಗಾಲ ಬಂತೆಂದರೆ ಸಾಕು ಕೆಸರುಮಯವಾಗಿ ಪಾದಾ ಚಾರಿಗಳು ಬೀದಿಯಲ್ಲಿ ನೆಮ್ಮದಿಯಿಂದ ತಿರುಗಾಡಲು ಸಹ ಅಸಹ್ಯ ಪಡುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಮನೆಗಳ ಎದರು ರಸ್ತೆಯ ಎರಡು ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಕೆಲವೆಡೆ ಮನೆ ಮುಂಭಾಗದ ಒಂದು ಭಾಗದಲ್ಲಿ ಕಟ್ಟಿರುವ ತೆರೆದ ಚರಂಡಿಗಳು ಸ್ವಚ್ಚತೆ ಕಾಣದೇ ಗಬ್ಬೆದ್ದಿವೆ. ಕೆಲವು ಕಡೆ ಚರಂಡಿಯಲ್ಲಿ ಹೋಗಬೇಕಾದ ಕೊಳಚೆ ನೀರು ನಡು ಬೀದಿಯಲ್ಲಿಯೇ ಹರಿದು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಕುಗ್ರಾಮವಾಗಿದೆ.

ಮಾಜಿ ಸಚಿವ ಕೆ.ಬಿ. ಮಲ್ಲಪ್ಪ ಶಾಸಕರಾಗಿದ್ದ ಅವಧಿಯಲ್ಲಿ ಊರಾಚೆ ಕಟ್ಟಿಸಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದೆ.

ಈ ಟ್ಯಾಂಕ್‌ನಿಂದ ಗ್ರಾಮದ ಎಲ್ಲ ಕುಟುಂಬಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗದೇ ನೀರಿಗಾಗಿ ಪರದಾಡಬೇಕಾಗಿದೆ. ಶೀಘ್ರವೇ ಸಂಬಂಧ ಪಟ್ಟ ವರು ಹೊಸದಾಗಿ ಮತ್ತೊಂದು ಟ್ಯಾಂಕ್ ನಿರ್ಮಿಸಿ ಕುಡಿ ಯುವ ನೀರಿನ ಸಮಸ್ಯೆ ನೀಗಿಸಲು ಇತ್ತ ಗಮನ ಹರಿಸಬೇಕಿದೆ.

ಗ್ರಾಮದ ಹಿಂಭಾಗದಲ್ಲಿ ಹಾರಂಗಿ ಬಲದಂಡೆ ನಾಲೆ ಹಾದು ಹೋಗಿದೆ. ಆದರೆ, ನಾಲೆಗೆ ಎಂದೋ ಕಟ್ಟಬೇಕಿದ್ದ ಸಂಪರ್ಕ ಸೇತುವೆ ಈವರೆಗೂ ನಿರ್ಮಾಣವಾಗಿಲ್ಲ. ಪರಿಣಾಮವಾಗಿ ಗ್ರಾಮಸ್ಥರು ಜಮೀನಿನತ್ತ ಹೊಗಿ ಬರಲು ಪ್ರತಿನಿತ್ಯ 2 ಕಿ.ಮೀ. ದೂರದ ಹಾದಿ ಸವೆಸಬೇಕು. ನಾಲೆಗೆ ಕಿರು ಸೇತುವೆ ನಿರ್ಮಾಣ ಮಾಡಿದರೆ ಜನ-ಜಾನುವಾರುಗಳ ಓಡಾಟಕ್ಕೆ ಅನುಕೂಲ ಆಗುವುದಲ್ಲದೇ ನಿತ್ಯವೂ ಸುತ್ತಿ ಬಳಸುವುದು ತಪ್ಪುತ್ತದೆ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.