ADVERTISEMENT

ಉದ್ಘಾಟನೆಗೂ ಮುನ್ನವೇ ಸೇತುವೆ ತಡೆಗೋಡೆ ಕುಸಿತ

ಜಾನೆಕೆರೆ ಆರ್‌.ಪರಮೇಶ್‌
Published 24 ಜೂನ್ 2013, 8:10 IST
Last Updated 24 ಜೂನ್ 2013, 8:10 IST

ಸಕಲೇಶಪುರ: ಉದ್ಘಾಟನೆಗೂ ಮುನ್ನವೇ ಸೇತುವೆಯ ತಡೆ ಗೋಡೆ ಕುಸಿದಿರುವುದು ತಾಲ್ಲೂಕಿನ ಹಾರ್ಲೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹಾರ್ಲೆ ಸಕಲೇಶಪುರ-ಮೂಡಿಗೆರೆ ಮುಖ್ಯ ರಸ್ತೆಯಿಂದ ಹಾರ್ಲೆ, ಕುಂಬರಡಿ, ನಡಹಳ್ಳಿ, ದೇಖಲ ಸೇರಿದಂತೆ ಹತ್ತಾರು ಗ್ರಾಮ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಹರಿಯುವ ಎತ್ತಿನಹೊಳೆಗೆ ರೂ. 1.1 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. 2006-07ನೇ ಸಾಲಿನಲ್ಲಿ ರೂ. 50 ಲಕ್ಷ ಅಂದಾಜು ವೆಚ್ಚದಲ್ಲಿ ಶುರುವಾಗಿದ್ದ ಸೇತುವೆ ಕಾಮಗಾರಿ, ಹಣ ಬಿಡುಗಡೆಯಾಗದೆ ಐದು ವರ್ಷ ನೆನೆಗುದಿಗೆ ಬಿದ್ದಿತ್ತು. 2011-12ರಲ್ಲಿ ರೂ. 1.1 ಕೋಟಿ ಮರು ಅಂದಾಜು ಯೋಜನೆ ರೂಪಿಸಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪುನರಾರಂಭಿಸಲಾಯಿತು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಕಾಮಗಾರಿ ನಿರ್ವಹಣೆ ಹೊಣೆ ಹೊತ್ತಿದ್ದು, ಗುತ್ತಿಗೆಯನ್ನು ಗ್ಯಾಮನ್ ಇಂಡಿಯಾ ಲಿಮಿಟೆಡ್ ಪಡೆದಿದೆ. ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ವಾರದ ಹಿಂದೆ ಸುರಿದ ಮಳೆಗೆ ಸೇತುವೆಯ ತಡೆಗೋಡೆ ಕುಸಿದಿದೆ. `ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಎಂಜಿನಿಯರ್‌ಗಳಿಗೆ ಹಾಗೂ ಕಾಮಗಾರಿ ಗುತ್ತಿಗೆ ನಡೆಸುತ್ತಿರುವ ಗ್ಯಾಮನ್ ಇಂಡಿಯಾ ಲಿಮಿಟೆಡ್‌ನ ಅಧಿಕಾರಿಗಳಿಗೆ ಸೇತುವೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂಬುದನ್ನು ತಿಳಿಸಲಾಗಿತ್ತು. ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮೊದಲ ಮಳೆಗೆ ತಡೆಗೋಡೆ ಕುಸಿದಿದೆ' ಎಂದು ಕಾಂಗ್ರೆಸ್‌ನ ಕಾರ್ಮಿಕ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸನ್ನಿ ಆ್ಯಂಡ್ರೋಸ್ ದೂರಿದ್ದಾರೆ.

ಕಾರ್ಯಪಾಲಕ ಎಂಜಿನಿಯರ್ ಹೇಳಿಕೆ: `ಸೇತುವೆಯ ತಡೆಗೋಡೆ ಕುಸಿದಿರುವುದನ್ನು ಸ್ಥಳಕ್ಕೆ ಭೇಟಿ ಪರಿಶೀಲಿಸಲಾಗಿದೆ. ಸೇತುವೆ ಪಕ್ಕದ ರಸ್ತೆಗೆ ಹಾಕಿರುವ ತಡೆಗೋಡೆ ಮಳೆ ನೀರಿಗೆ ಕುಸಿದಿರುವುದರಿಂದ ಸೇತುವೆ ಗಾಗಲಿ ರಸ್ತೆಗಾಗಲಿ ತಾಂತ್ರಿಕವಾಗಿ ಹಾನಿ ಇಲ್ಲ. ಕಾಮಗಾರಿ ಪೂರ್ಣ ಗೊಂಡಿಲ್ಲ. ರೂ. 1.1 ಕೋಟಿಯಲ್ಲಿ ಗುತ್ತಿಗೆ ಪಡೆದಿರುವ ಕಂಪನಿಗೆ ರೂ. 70 ಲಕ್ಷ ಪಾವತಿಸಲಾಗಿದೆ. ರಸ್ತೆಗೆ ವ್ಯವಸ್ಥಿತ ಚರಂಡಿ ನಿರ್ಮಾಣ ಹಾಗೂ ರಸ್ತೆಗೆ ಜಲ್ಲಿ ಹಾಕಿ ಮೆಟ್ಲಿಂಗ್ ಮಾಡಬೇಕು ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಸಹಾಯಕ ಕಾರ್ಯಪಾಲ ಎಂಜಿನಿಯರ್ ಮಂಜುನಾಥ್ ಹೇಳಿದ್ದಾರೆ.

ಶಾಸಕರ ಪ್ರತಿಕ್ರಿಯೆ:  ಹಾರ್ಲೆ ಸೇತುವೆ ತಡೆಗೋಡೆ ಕುಸಿದಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಕೆಆರ್‌ಡಿಸಿಎಲ್ ಎಂಜಿನಿಯರ್ ಜೊತೆ ಮಾತುಕತೆ ನಡೆಸಿದ್ದೇನೆ. ಕುಸಿದಿರುವ ತಡೆಗೋಡೆ ಯನ್ನು ತಕ್ಷಣ ಗುಣಮಟ್ಟದಲ್ಲಿ ಮರು ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ. ಗುತ್ತಿಗೆದಾರರಿಗೆ ಪೂರ್ತಿ ಹಣ ಪಾವತಿ ಆಗಿಲ್ಲವಾದ್ದ ರಿಂದ, ಕಾಮಗಾರಿಯನ್ನು ಪೂರ್ಣ ಗೊಳಿಸಿ, ಎಂಜಿನಿಯರ್‌ಗಳು ಗುಣಮಟ್ಟವನ್ನು ದೃಢೀಕರಿಸಿದ ನಂತರ ಬಾಕಿ ಹಣ ಪಾವತಿ ಮಾಡು ವಂತೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಶಾಸಕ ಎಚ್.ಕೆ. ಕುಮಾರ ಸ್ವಾಮಿ ತಿಳಿಸಿದ್ದಾರೆ.

ಅಧಿಕಾರಿಗಳು ಏನೇ ಸ್ಪಷ್ಟನೆ ನೀಡಿದರೂ, ಗುಣಮಟ್ಟದ ಕಾಮಗಾರಿ ನಡೆದಿಲ್ಲ ಎಂಬುದನ್ನು ಕುಸಿದಿರುವ ತಡೆಗೋಡೆ ಸಾಕ್ಷೀಕರಿಸು ತ್ತದೆ. ಮುಂದೆ ಯಾವುದೇ ಅನಾಹುತ ಉಂಟಾಗದಂತೆ ಅಧಿಕಾರಿಗಳು ಈಗಲೇ ಗಮನಹರಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಸ್ಥಳೀಯರ ಒಕ್ಕೊರಲ ದನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.