ADVERTISEMENT

ಏ.15ರಂದು ಚನ್ನಕೇಶವಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 8:50 IST
Last Updated 3 ಏಪ್ರಿಲ್ 2011, 8:50 IST
ಏ.15ರಂದು ಚನ್ನಕೇಶವಸ್ವಾಮಿ ರಥೋತ್ಸವ
ಏ.15ರಂದು ಚನ್ನಕೇಶವಸ್ವಾಮಿ ರಥೋತ್ಸವ   

ಬೇಲೂರು: ಏ.15ರಂದು ಚನ್ನಕೇಶವಸ್ವಾಮಿ ರಥೋತ್ಸವ ಜರುಗಲಿರುವ ಹಿನ್ನೆಲೆಯಲ್ಲಿ ದೇವರಿಗೆ ತೊಡಿಸುವ ಚಿನ್ನದ ಆಭರಣಗಳನ್ನು ಖಜಾನೆಯಿಂದ ದೇವಾಲಯಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ದೇವಾಲಯದ ಸಂಪ್ರದಾಯದಂತೆ ಖಜಾನೆಗೆ ಆಗಮಿಸಿದ ಅಧಿಕಾರಿಗಳು, ಅರ್ಚಕರು ಮತ್ತು ವ್ಯವಸ್ಥಾಪನಾ ಮಂಡಳಿಯ ಸದಸ್ಯರು ಖಜಾನೆಯಿಂದ ದೇವರ ಆಭರಣಗಳನ್ನು ಹೊರ ತೆಗೆದು ಪರಿಶೀಲಿಸಿದರು. ಬಳಿಕ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಯುಗಾದಿಯಂದು ಚೆನ್ನಕೇಶವ ಸ್ವಾಮಿ ಮತ್ತು ಸೌಮ್ಯನಾಯಕಿ ಅಮ್ಮನವರಿಗೆ ಆಭರಣ ಹಾಕಿ ವಿಶೇಷವಾಗಿ ಅಲಂಕರಿಸಲಾಗುತ್ತದೆ.
 

ಏ.7ರಂದು ಶಾರದಾಲಂಕಾರೋತ್ಸವ,  8ರಂದು ಕಲ್ಯಾಣೋತ್ಸವ, 9ರಂದು ಚಂದ್ರಮಂಡಲಾರೋಹಣೋತ್ಸವ, 10ರಂದು ಅನಂತ ಪೀಠಾರೋಹಣೋತ್ಸವ, 11ರಂದು ಬೆಳ್ಳಿ ಮಂಟಪೋತ್ಸವ, 12 ರಂದು ದಿವ್ಯ ಬೆಳ್ಳಿ ಮಂಟಪೋತ್ಸವ, 13ರಂದು ಹನುಮಂತೋತ್ಸವ, 14 ರಂದು ದಿವ್ಯ ಗರುಡೋತ್ಸವ ನಡೆಯಲಿದೆ.ಏ.15 ರಂದು  ಬೆಳಿಗ್ಗೆ 10.05 ರಿಂದ 10.30ರೊಳಗೆ ಶುಭ ಮಿಥುನ ಲಗ್ನದಲ್ಲಿ ‘ಶ್ರೀಯವರ ದಿವ್ಯ ರಥಾರೋಹಣ’ ಅಥವಾ ‘ಗಳಿಗೆ ತೇರು’ ನಡೆಯಲಿದೆ. 16ರಂದು ನಾಡಿನ ದಿವ್ಯ ರಥೋತ್ಸವ, 17 ರಂದು ತೆಪ್ಪೋತ್ಸವ, 18 ರಂದು ಸಿಂಹಾರೋಹಣೋತ್ಸವ, 19ರಂದು ಮೋಹಿನಿ ಅಲಂಕಾರೋತ್ಸವ ಮತ್ತು 20ರಂದು ಶಯನೋತ್ಸವದೊಂದಿಗೆ ರಥೋತ್ಸವಾದಿಗಳಿಗೆ ತೆರೆ ಬೀಳಲಿದೆ.
 

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಶಿವರುದ್ರಪ್ಪ, ಸದಸ್ಯರಾದ ಬಿ.ಆರ್.ವೆಂಕಟೇಗೌಡ, ಜಗದೀಶ್, ಕಾರ್ಯ ನಿರ್ವಾಹಕ ಅಧಿಕಾರಿ ನಿಂಗಯ್ಯ, ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿ ಭಟ್, ಶ್ರೀನಿವಾಸ್ ಭಟ್, ಶಿರಸ್ತೇದಾರ್ ವೆಂಕಟೇಶ್ ಮೆರವಣಿಗೆಯಲ್ಲಿದ್ದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.