ADVERTISEMENT

ಒಬ್ಬನ ಬಂಧನ, ಮೂವರು ಪರಾರಿ

ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 8:34 IST
Last Updated 18 ಜುಲೈ 2013, 8:34 IST

ಹಾಸನ:  ತಾಲ್ಲೂಕಿನ ಕೋಗೋಡು ಗ್ರಾಮದ ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧ ಕಾರ್ಯಕ್ಕೆ ತಯಾರಿ ನಡೆಸಿದ್ದ ನಾಲ್ವರಲ್ಲಿ ಒಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

  ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಹೇಶ್ ಘಟನೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿ, `ಬುಧವಾರ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಕೋಗೋಡು ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಜನ ಸೇರಿದ್ದರು.

ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಪೊದೆ ಇರುವ ಸ್ಥಳದಲ್ಲಿ 15 ಅಡಿ ಸುತ್ತಳತೆಯಷ್ಟು ಸ್ಥಳದಲ್ಲಿ ಗಿಡಗಳನ್ನು ಕತ್ತರಿಸಲಾಗಿತ್ತು. ನಿಧಿ ಶೋಧಕ್ಕಾಗಿ ಅಲ್ಲಿ ಬಾಟಲಿಯೊಳಗೆ ಮಂತ್ರದ ತಗಡು, ತಾಯಿತ, ಬಣ್ಣದ ದಾರದ ಉಂಡೆ, ಪಿಕಾಸಿ, ಹಾರೆ, ಗುದ್ದಲಿ,  ಮಚ್ಚು ಹಾಗೂ ಬಾಂಡಲಿ ಇತ್ಯಾದಿ ಪದಾರ್ಥಗಳನ್ನು ಇಡಲಾಗಿತ್ತು.

ನಿಧಿ ಶೋಧ ಮಾಡುವಲ್ಲಿ ಕೋಗೋಡು ಗ್ರಾಮದ ಅಬೂಜಾನ್ ಎಂಬ ಯುವಕನ ಪಾತ್ರ ಇದೆ ಎಂದು ತಿಳಿಯಿತು. ಆತನನ್ನು ಹಿಡಿದು ಪ್ರಶ್ನಿಸಿದಾಗ ಮಂಗಳವಾರ ರಾತ್ರಿ 3 ಗಂಟೆಯ ಸಮಯದಲ್ಲಿ ಪೂಜಾ ಸಾಮಗ್ರಿಗಳನ್ನು ತಂದು ಸ್ವಚ್ಛಗೊಳಿಸಿದ್ದೇವೆ ಮತ್ತು ಈ ಸ್ಥಳ ನಮ್ಮದು ಅದಕ್ಕಾಗಿ ತಳಪಾಯ ತೋಡಲು ಬಂದಿರುವುದಾಗಿ ತಿಳಿಸಿದ.

ತಳಪಾಯ ತೋಡಲು ತಗಡು, ದಾರದ ಉಂಡೆ ಇತ್ಯಾದಿ ಏಕೆ ಬೇಕು ಎಂದು ಪ್ರಶ್ನಿಸಿದಾಗ ಸಮರ್ಪಕವಾಗಿ ಉತ್ತರಿಸಲಿಲ್ಲ. ಈ ವೇಳೆಗೆ ಅಬೂಜಾನ್‌ನ ಜೊತೆಯಲ್ಲಿದ್ದ ಮೂಡಿಗೆರೆಯ ಇಬ್ಬರು ಮತ್ತು ಸಕಲೇಶಪುರ ಮತ್ತೊಬ್ಬ ಕಾರಿನಲ್ಲಿ ಪರಾರಿಯಾದರು. ಅಬೂಜಾನ್‌ನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು' ಎಂದು ತಿಳಿಸಿದರು.

ಅರೆಹಳ್ಳಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಚಂದ್ರಪ್ಪ ಮತ್ತು ಸಿಬ್ಬಂದಿ ನಿಧಿ ಶೋಧದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿದ್ದ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅರೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT