ADVERTISEMENT

ಕಡಿಮೆ ಬೆಲೆಗೆ ತಂಬಾಕು ಖರೀದಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 8:20 IST
Last Updated 17 ಸೆಪ್ಟೆಂಬರ್ 2011, 8:20 IST

ರಾಮನಾಥಪುರ: ತಂಬಾಕು ಮಾರುಕಟ್ಟೆಯಲ್ಲಿ ಗುರುವಾರ ಪ್ರಾರಂಭವಾದ ಹರಾಜಿನಲ್ಲಿ ಉತ್ಕೃಷ್ಟ ದರ್ಜೆಯ ಹೊಗೆಸೊಪ್ಪನ್ನು ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದೆ ಎಂದು ಆರೋಪಿಸಿ ರೈತರು, ಶಾಸಕ ಎ. ಮಂಜು ಅವರ ಸಮ್ಮುಖದಲ್ಲಿಯೇ ಹರಾಜು ಪ್ರಕ್ರಿಯೆಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

ಶಾಸಕರು ಬೇಲ್‌ಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ಬಳಿಕ ಹರಾಜು ಪ್ರಕ್ರಿಯೆ ಆರಂಭಿಸಿದ ಅಧಿಕಾರಿಗಳು ಹಾಗೂ ವರ್ತಕರು ಉತ್ತಮ ದರ್ಜೆಯ ಹೊಗೆಸೊಪ್ಪನ್ನು ಕೆ.ಜಿ. ಒಂದಕ್ಕೆ 123ರಿಂದ 125 ರೂಪಾಯಿಗೆ ಕೂಗಲಾರಂಭಿಸಿದರು. ಇದರಿಂದ ಸಿಟ್ಟಿಗೆದ್ದ ರೈತರು ಹರಾಜು ಪ್ರಕ್ರಿಯೆಗೆ ತಡೆಯೊಡ್ಡಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ದಿಢೀರ್ ಪ್ರತಿಭಟನೆಗೆ ಇಳಿದರು.

ಇದರಿಂದ ಮಾರುಕಟ್ಟೆಯಲ್ಲಿ ಉದ್ರಿಕ ವಾತಾವರಣ ನಿರ್ಮಾಣವಾಯಿತು. ವರ್ತಕರು ಹರಾಜನ್ನು ನಿಲ್ಲಿಸಿ ಹೊರ ನಡೆದರು. ನಂತರ ಶಾಸಕರು ಅಧಿಕಾರಿಗಳು ಹಾಗೂ ಪ್ರತಿಭಟನಾ ನಿರತ ರೈತರನ್ನು ಒಂದೆಡೆ ಸೇರಿಸಿ ಮಾತುಕತೆ ನಡೆಸಿದರು. ಉತ್ತಮ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತಗೆ ಮನವಿ ಮಾಡಿದರು.

ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ವೇಣುಗೋಪಾಲ್ ಮಾತನಾಡಿ, ಪ್ರಾರಂಭದಲ್ಲಿ ಒಂದು ವಾರದ ಮಟ್ಟಿಗೆ ಶಾಂಪಲ್‌ಗಾಗಿ ಖರೀದಿಸಲಾಗುತ್ತಿದೆ. ವಿದೇಶಿ ವರ್ತಕರಿಂದ ಬೇಡಿಕೆ ಬಂದರೆ ಮತ್ತೆ ಬೆಲೆ ಏರಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇದರಿಂದ ಸಮಾಧಾನಗೊಳ್ಳದ ರೈತರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಯನ್ನು ತೀವ್ರಗೊಳಿಸಿದರು. ಪ್ರತಿ ವರ್ಷ ಇದೇ ರೀತಿ ಸಬೂಬು ಹೇಳಿ ಹರಾಜು ಮುಗಿಯುವ ತನಕ ವರ್ತಕರು ಮನಬಂದಂತೆ ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದೆ ಎಂದು ದೂರಿದರು.

ಬಗೆಹರಿಯದ ಸಮಸ್ಯೆ: ತಂಬಾಕಿಗೆ ಉತ್ತಮ ಬೆಲೆ ದೊರಕಿಸಿಕೊಡುವಂತೆ ಆಗ್ರಹಿಸಿ ರೈತರು ನಡೆಸುತ್ತಿದ್ದ ವೇಳೆ ಶಾಸಕ ಎ. ಮಂಜು ಅವರು ಸಮಸ್ಯೆ ಬಗೆಹರಿಸದೇ ಹಾಗೆ ಹೋಗಿದ್ದು ರೈತರ ಆಕ್ರೋಶಕ್ಕೆ ಕಾರಣವಾಯಿತು.
ಪ್ರತಿವರ್ಷ ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಬೆಳೆಗಾರರು ಅನ್ಯಾಯಕ್ಕೆ ಒಳಗಾಗುತ್ತಿದ್ದರೂ ಜನಪ್ರತಿನಿಧಿಗಳು ಒಮ್ಮೆಯೂ ತಲೆಕೆಡಿಸಿ ಕೊಳ್ಳುತ್ತಿಲ್ಲ.
 
ರಸಗೊಬ್ಬರದ ಸಮಸ್ಯೆ ಎದುರಾದಗಲೂ ತುಟಿ ಬಿಚ್ಚಿಲಿಲ್ಲ. ಇದೀಗ ಶಾಸಕರ ಸಮ್ಮುಖದಲ್ಲಿಯೇ ಬೇಕಾಬಿಟ್ಟಿ ಬೆಲೆಗೆ ಖರೀದಿಸಲು ಮುಂದಾಗಿದ್ದರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸ್ಥಳದಲ್ಲಿಯೇ ಇದ್ದರೂ ಮಾರುಕಟ್ಟೆ ವ್ಯವಸ್ಥೆ ಸರಿಪಡಿಸುವ ಗೋಜಿಗೆ ಹೋಗದೇ ಅಲ್ಲಿಂದ ಕಾಲ್ಕಿಳಲು ಯತ್ನಿಸುತ್ತಿದ್ದಾರೆ ಎಂದು ಶಾಸಕರ ವಿರುದ್ದ ಹರಿಹಾಯ್ದರು.

ಶಾಸಕ ಎ. ಮಂಜು ಅವರು ಮತ್ತೆ ಹರಾಜು ಅಧೀಕ್ಷಕರ ಕಚೇರಿಗೆ ಆಗಮಿಸಿ ಅಧಿಕಾರಿಗಳು ಮತ್ತು ವರ್ತಕರನ್ನು ಸೇರಿಸಿ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ, ಅಲ್ಲಿ ಶಾಸಕರ ಮಾತಿಗೆ ಸಮ್ಮತಿ ಸಿಕ್ಕಿತೆ ಹೊರತು ಬೆಲೆ ನಿಗದಿ ಕುರಿತಂತೆ ಅಧಿಕಾರಿಗಳು ಮತ್ತು ವರ್ತಕರು ಯಾವುದೇ ತಿರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆಗೂ ಬೆಲೆ ಸಮಸ್ಯೆ ಮಾತ್ರ ಬಗೆಹರಿಯದೇ ಕಗ್ಗಂಟಾಗಿಯೇ ಉಳಿಯಿತು. ಇದರಿಂದ ಬೇಸತ್ತ ರೈತರು ಪ್ರತಿಭಟನೆಯನ್ನು ಕೈಬಿಟ್ಟು ವಾಪಾಸ್ಸಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.