ಮೈಸೂರು: ಭಾರತ-ಪಾಕಿಸ್ತಾನ ನಡುವೆ ಪ್ರೀತಿ-ಶಾಂತಿ ಸಂದೇಶ ಸಾರುವ ನಿಟ್ಟಿನಲ್ಲಿ ದೆಹಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ತಂಡ ಕನ್ಯಾಕುಮಾರಿಯಿಂದ ಇಸ್ಲಾಮಾಬಾದ್‌ಗೆ `ಸೈಕಲ್ ಜಾಥಾ' ಹೊರಟಿದೆ.
ಕಳೆದ ಜೂನ್ 1ರಂದು ಕನ್ಯಾಕುಮಾರಿಯಿಂದ ಹೊರಟಿದ್ದ 6 ವಿದ್ಯಾರ್ಥಿಗಳನ್ನು ಒಳಗೊಂಡ ತಂಡ 800 ಕಿ.ಮೀ. ದೂರ ಕ್ರಮಿಸಿ ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿದ್ಯಾನಿಲಯಕ್ಕೆ ಮಂಗಳವಾರ ಭೇಟಿ ನೀಡಿತ್ತು. ಮಾನಸಗಂಗೋತ್ರಿಯ ರೌಂಡ್ ಕ್ಯಾಂಟೀನ್ ಬಳಿ ಇರುವ ಆಲದಮರದ ಕೆಳಗೆ ತಂಡ ಕೆಲಕಾಲ ವಿಶ್ರಾಂತಿ ಪಡೆಯಿತು.
ದೊಡ್ಡದಾದ ಎರಡು ರಾಷ್ಟ್ರಧ್ವಜಗಳನ್ನು ಹಿಡಿದು, ಹಳದಿ ಬಣ್ಣದ ಟೀ-ಶರ್ಟ್ ತೊಟ್ಟಿದ್ದ ಯುವಕರು ಕ್ಯಾಮೆರಾಗೆ ಭಂಗಿ ನೀಡುತ್ತಿದ್ದರು.
ರಾಷ್ಟ್ರಧ್ವಜ ಮತ್ತು ಸೈಕಲ್‌ನೊಂದಿಗೆ ನಿಂತಿದ್ದ ಯುವಕರ ತಂಡವನ್ನು ಗಮನಿಸಿದ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು `ಸೈಕಲ್ ಜಾಥಾ' ಬಗ್ಗೆ ಮಾಹಿತಿ ಪಡೆದುಕೊಂಡರು. ಸಹಿ ಮಾಡಿ, ಅಭಿಪ್ರಾಯಗಳನ್ನು ಪುಸ್ತಕದಲ್ಲಿ ದಾಖಲಿಸಿ ಜಾಥಾಕ್ಕೆ ಬೆಂಬಲ ಸೂಚಿಸಿದರು.
ದಾರಿಯುದ್ದಕ್ಕೂ ಸಿಗುವ ವಿಶ್ವವಿದ್ಯಾನಿಲಯಗಳು ಮತ್ತು ಸಂಘ-ಸಂಸ್ಥೆಗಳಲ್ಲಿ `ಸೈಕಲ್ ಜಾಥಾ' ತಂಡ ಆಶ್ರಯ ಪಡೆಯುತ್ತಿದೆ. ನಿತ್ಯ ಕನಿಷ್ಠ 50-60 ಕಿ.ಮೀ.ನಷ್ಟು ಪ್ರಯಾಣ ಮಾಡುತ್ತಿದೆ. ಅಟ್ಲಾಸ್ ಸಾಮಾನ್ಯ ಸೈಕಲನ್ನೇ ಜಾಥಾಕ್ಕೆ ಬಳಸುತ್ತಿದ್ದು, ವಿಶೇಷವಾದ ಯಾವುದೇ ಸವಲತ್ತುಗಳಿಲ್ಲ.
ಹಾಗಾಗಿ, ಪ್ರಯಾಸ ಪಟ್ಟೆ ತಂಡ ದಾರಿಯನ್ನು ಸವೆಸುತ್ತಿದೆ. ಮಳೆಗಾಲ `ಸೈಕಲ್ ಜಾಥಾ'ಕ್ಕೆ ಅಡ್ಡಿಯಾಗಿದೆ. ಹಾಗಾಗಿ, ಮಳೆ ಬಂದಾಗ ಮರದ ಬುಡ ಇಲ್ಲವೇ ಬೇರೆಡೆ ಆಶ್ರಯ ಪಡೆದು ಮಳೆ ನಿಂತ ನಂತರ ಪ್ರಯಾಣ ಮುಂದುವರಿಸುತ್ತಿದೆ.
`ನೆರೆಯ ರಾಷ್ಟ್ರಗಳಾದ ಭಾರತ-ಪಾಕಿಸ್ತಾನದ ಸಂಬಂಧ ದಿನೆ ದಿನೇ ಹದಗೆಡುತ್ತಿದೆ. ಗಡಿ ಸಮಸ್ಯೆ ತಲೆದೋರುತ್ತಲೇ ಇದೆ. ಹಾಗಾಗಿ, ಎರಡು ರಾಷ್ಟ್ರಗಳ ನಡುವೆ ವೈಷಮ್ಯ ತಲೆದೋರುತ್ತಿದೆ. ಸಹೋದತ್ವ, ಪ್ರೀತಿಯನ್ನು ಎರಡೂ ರಾಷ್ಟ್ರಗಳು ಬೆಳೆಸಿಕೊಳ್ಳಬೇಕು. ಯುದ್ಧದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ, ಶಸ್ತ್ರವನ್ನು ತ್ಯಜಿಸಿ ಪ್ರೀತಿಯಿಂದ ಎಲ್ಲವನ್ನು ಗೆಲ್ಲಬೇಕು ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ `ಸೈಕಲ್ ಜಾಥಾ' ನಡೆಸಲಾಗುತ್ತಿದೆ. ಆ.15 ರಂದು ವಾಘ ಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುವುದು. ಆ. 31ರಂದು ಇಸ್ಲಾಮಾಬಾದ್ ತಲುಪಲಾಗುವುದು. ಕನ್ಯಾಕುಮಾರಿಯಿಂದ ಇಸ್ಲಾಮಾಬಾದ್‌ವರೆಗೆ ಒಟ್ಟಾರೆ 4,500 ಕಿ.ಮೀ. ಕ್ರಮಿಸಲಾಗುವುದು. ಜಾಥಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ, ಸಹಿ ಸಂಗ್ರಹ ಮಾಡಲಾಗುತ್ತಿದೆ. ಜಾಥಾ ಮುಕ್ತಾಯಗೊಂಡ ಬಳಿಕ ಎರಡೂ ದೇಶದ ಅಧ್ಯಕ್ಷರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು' ಎಂದು ಜಾಥಾದ ಸಮನ್ವಯಾಧಿಕಾರಿ ಸುಬೇರ್ `ಪ್ರಜಾವಾಣಿ'ಗೆ ತಿಳಿಸಿದರು. ಪ್ರವೀಣ್, ದೇಶಪಾಲ್, ಹರ್ಷ್, ರಾಮ್, ನಾರಾಯಣ್ ಮತ್ತು ವಿಕಾಶ್ `ಜಾಥಾ'ದಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.