ADVERTISEMENT

ಕರ ವಸೂಲಿಯಲ್ಲಿ ಸ್ಥಳೀಯ ಸಂಸ್ಥೆ ಹಿಂದೆ: ಸಚಿವ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 8:45 IST
Last Updated 3 ಫೆಬ್ರುವರಿ 2011, 8:45 IST

ಹಾಸನ: ‘ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ ಮುಂತಾದ ಸ್ಥಳೀಯ ಸಂಸ್ಥೆಗಳು ಆರ್ಥಿಕ ಶಿಸ್ತು ರೂಢಿಸಿಕೊಳ್ಳಬೇಕು. ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸಬಾರದು’ ಎಂದು ನಗರಾಭಿವೃದ್ಧಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ನುಡಿದರು.ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬುಧವಾರ ಹಾಸನಕ್ಕೆ ಬಂದಿದ್ದ ಪತ್ರಕರ್ತರಿಗೆ ಈ ವಿಚಾರ ತಿಳಿಸಿದರು.

‘ಅನೇಕ ಸ್ಥಳೀಯ ಸಂಸ್ಥೆಗಳು ಕರ ವಸೂಲಿ ಮಾಡುವುದರಲ್ಲೇ ಹಿಂದೆ ಬಿದ್ದಿವೆ. ತನ್ನದೇ ಜಾಗದಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳಿಂದ ಬರಬೇಕಾದ ಬಾಡಿಗೆಯನ್ನೂ ಸಕಾಲಕ್ಕೆ ಸಂಗ್ರಹಿಸುತ್ತಿಲ್ಲ. ಬದಲಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ದುಂಬಾಲು ಬೀಳುತ್ತವೆ. ಈ ಎಲ್ಲ ಹಿನ್ನೆಲೆಯಲ್ಲಿ ಸರ್ಕಾರ ಸಮಗ್ರವಾದ ನಗರಾಭಿವೃದ್ಧಿ ನೀತಿಯನ್ನು ರೂಪಿಸಿದ್ದು, ಮುಂದಿನ ಸಂಪುಟದಲ್ಲಿ ಅನುಮೋದನೆ ಪಡೆದು ಜಾರಿಗೆ ತರಲಾಗುವುದು’ ಎಂದರು.

2020ರ ವೇಳೆಗೆ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ 50 ಕೋಟಿ ಜನರು ನಗರಗಳಲ್ಲಿ ವಾಸ ಮಾಡಲಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಆಗಬಹುದಾದ ಬೆಳವಣಿಗೆಗಳನ್ನು ಗಮನದಲ್ಲಿಟ್ಟು ನೀತಿ ರೂಪಿಸಲಾಗಿದೆ. ನಗರಪಾಲಿಕೆಗಳಲ್ಲಿ  ವೃಂದ ನೇಮಕಾತಿಗೆ ತೀರ್ಮಾನಿಸಿದ್ದು, ಈ ನೀತಿ ಜಾರಿಗೆ ಬಂದರೆ ನಗರಪಾಲಿಕೆಗಳ ಸಿಬ್ಬಂದಿಯ ವರ್ಗಾವಣೆಗೂ ಅವಕಾಶವಿರುತ್ತದೆ’ ಎಂದರು.

ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆ, ಅಭಿವೃದ್ಧಿ ಮಾಡಲಾಗಿದೆ. ರಾಜ್ಯದಲ್ಲಿ ಮೊದಲಬಾರಿ ಎಂಬಂತೆ ಕೆಲವು ಮಾನದಂಡಗಳನ್ನಿಟ್ಟುಕೊಂಡು ಈಚೆಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಮೌಲ್ಯಮಾಪನ ಮಾಡಿ, ಲೋಪ ದೋಷಗಳನ್ನು ಕಂಡುಕೊಳ್ಳಲಾಗಿದೆ. ಅನೇಕ ಸಂಸ್ಥೆಗಳು ಮಾದರಿಯಾದಂಥ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಂಥ ಯೋಜನೆಗಳ ಬಗ್ಗೆ ಪುಸ್ತಕ ಪ್ರಕಟಿಸಿ ವಿತರಿಸಲಾಗುವುದು ಎಂದರು.

‘ಸ್ಥಳೀಯ ಸಂಸ್ಥೆಗಳ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಕೆಲವೆಡೆ ಅಧಿಕಾರಿಗಳು, ಜನಪ್ರತಿನಿಧಿಗಳು ಗುತ್ತಿಗೆದಾರರ ನಡುವೆ ಅಪವಿತ್ರ ಮೈತ್ರಿ ಇದೆ. ಇವೆಲ್ಲದರ ನಡುವೆಯೂ ಜನಪರ ಆಡಳಿತಕ್ಕೆ ಬೇಕಾದ ವ್ಯವಸ್ಥೆ ರೂಪಿಸುತ್ತಿದ್ದೇವೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಒಳ್ಳೆಯ ಕೆಲಸ ಮಾಡಬಹುದು ಎಂದು ಸುರೇಶ್ ಕುಮಾರ್ ನುಡಿದರು. ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿಯ ಕೆಲವು ರಾಷ್ಟ್ರೀಯ ಮುಖಂಡರು ನೀಡಿರುವ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸುರೇಶ್, ‘ರಾಜ್ಯಪಾಲರು ಮಾಡಿರುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಈಗಲೂ ಅದನ್ನೇ ಹೇಳುತ್ತಿದ್ದೇವೆ.ಅವರ ತೀರ್ಮಾನದ ವಿರುದ್ಧ ಮುಂದೇನು ಮಾಡಬೇಕು ಎಂಬುದನ್ನು ಶೀಘ್ರದಲ್ಲೇ ತೀರ್ಮಾನಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.