ADVERTISEMENT

ಕಲ್ಲು ಗಣಿಗಾರಿಕೆ: ತಾತ್ಕಾಲಿಕ ಸ್ಥಗಿತಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 8:00 IST
Last Updated 20 ಮಾರ್ಚ್ 2012, 8:00 IST
ಕಲ್ಲು ಗಣಿಗಾರಿಕೆ: ತಾತ್ಕಾಲಿಕ ಸ್ಥಗಿತಕ್ಕೆ ಆದೇಶ
ಕಲ್ಲು ಗಣಿಗಾರಿಕೆ: ತಾತ್ಕಾಲಿಕ ಸ್ಥಗಿತಕ್ಕೆ ಆದೇಶ   

ಹಾಸನ: ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಅರಸೀಕೆರೆ ತಾಲ್ಲೂಕು ರಂಗನಾಥಪುರ ಕಾವಲು ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ಹಾಸನ ತಹಶೀಲ್ದಾರ ಕೆ. ಮಥಾಯಿ ಅವರು ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶ ನೀಡಿದ್ದಾರೆ.

ಇಲ್ಲಿ ನಡೆಸುವ ಗಣಿಗಾರಿಕೆಯಿಂದಾಗಿ ಹಾಸನ ತಾಲ್ಲೂಕು ವ್ಯಾಪ್ತಿಯ ಹಂಗರಹಳ್ಳಿಯಲ್ಲಿ ಮನೆಗಳು ಬಿಡುಕು ಬಿಡುತ್ತಿರುವುದಾಗಿ ದೂರು ಬಂದಿರುವ ಹಿನ್ನೆಲೆಯಲ್ಲಿ ತಹಶೀಲ್ದಾರರು ಈ ಸೂಚನೆ ನೀಡಿದ್ದಾರೆ.

ರಂಗನಾಥಪುರ ಕಾವಲಿನಲ್ಲಿ ಖಾಸಗಿ ಸಂಸ್ಥೆಯವರು ಕೆಲವು ದಿನಗಳ ಹಿಂದೆ ದೊಡ್ಡ ಪ್ರಮಾಣದ ಜಲ್ಲಿ ಕ್ರಷರ್ ಅಳವಡಿಸಿ ಕಾಮಗಾರಿ ಆರಂಭಿಸಿದ್ದಾರೆ. ಗುಡ್ಡದಲ್ಲಿ ರಿಗ್‌ನಿಂದ ಗುಂಡಿ ತೋಡಿ, ಸ್ಫೋಟಕಗಳನ್ನು ಸಿಡಿಸಿ ಜಲ್ಲಿ ತಯಾರಿಸುತ್ತಿದ್ದಾರೆ. ಇದರಿಂದ ಸುಮಾರು ಮೂರು-ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸುತ್ತಿದೆ.

ವಿಶೇಷವಾಗಿ ಹಂಗರಹಳ್ಳಿಯ ಲಂಬಾಣಿ ತಾಂಡಾದಲ್ಲಿರುವ ಸುಮಾರು 60 ರಿಂದ 70  ಮನೆಗಳ ಗೋಡೆಗಳು ಬಿಡುಕು ಬಿಟ್ಟಿವೆ ಎಂದು ಸ್ಥಳೀಯರು ದೂರಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರರು ಸೋಮವಾರ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಭೇಟಿನೀಡಿದ ಮಥಾಯಿ, ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಖಾಸಗಿ ಸಂಸ್ಥೆಯವರಿಂದ ಮಾಹಿತಿ ಪಡೆದರು. ಸರ್ಕಾರ ಯಾವ ಪರವಾನಿಗೆ ನೀಡಿದೆ ಎಂಬುದನ್ನು ಪರಿಶೀಲಿಸಬೇಕಾಗಿದ್ದು, ಮಂಗಳವಾರದೊಳಗೆ ಪರವಾನಿಗೆಪತ್ರವನ್ನು ತಂದು ತೋರಿಸಬೇಕು, ಅಲ್ಲಿಯವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಸಂಸ್ಥೆಗೆ ಆದೇಶ ನೀಡಿದ್ದಾರೆ.

ಹಂಗರಹಳ್ಳದ ಲಂಬಾಣಿ ತಾಂಡಾದ ಅನೇಕ ಮನೆಗಳ ಗೋಡೆಯಲ್ಲಿ ದೊಡ್ಡ ಪ್ರಮಾಣದ ಬಿಡುಕು ಬಿಟ್ಟಿರುವುದು ಗೋಚರಿಸುತ್ತಿದೆ. `ಸ್ಫೋಟವಾದಾಗ ನಿಂತ ಭೂಮಿ ಕಂಪಿಸುವುದರಿಂದ ಮನೆಯೊಳಗೆ ಇರಲು ಭಯವಾಗುತ್ತಿದೆ. ಕ್ರಷರ್‌ನಿಂದಾಗಿ ಗ್ರಾಮದಲ್ಲಿ ಧೂಳು ತುಂಬಿಕೊಂಡಿದೆ. ಜನರು, ಜಾನುವಾರುಗಳು ಹಲವು ರೋಗಗಳಿಗೆ ಒಳಗಾಗುತ್ತಿದ್ದಾರೆ~ ಎಂದು ಸ್ಥಳೀಯರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.