ADVERTISEMENT

ಕಸ್ತೂರಿರಂಗನ್ ತಂಡ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2013, 19:59 IST
Last Updated 13 ಜನವರಿ 2013, 19:59 IST
ಸಕಲೇಶಪುರ ತಾಲ್ಲೂಕಿನ ಗುಂಡ್ಯ ಜಲವಿದ್ಯುತ್ ಯೋಜನಾ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಡಾ.ಕಸ್ತೂರಿರಂಗನ್ ಅವರಿಗೆ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌ಕುಮಾರ್ ಹಾಗೂ ಪರಿಸರವಾದಿಗಳು ಮನವಿಪತ್ರ ಸಲ್ಲಿಸಿದರು
ಸಕಲೇಶಪುರ ತಾಲ್ಲೂಕಿನ ಗುಂಡ್ಯ ಜಲವಿದ್ಯುತ್ ಯೋಜನಾ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಡಾ.ಕಸ್ತೂರಿರಂಗನ್ ಅವರಿಗೆ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌ಕುಮಾರ್ ಹಾಗೂ ಪರಿಸರವಾದಿಗಳು ಮನವಿಪತ್ರ ಸಲ್ಲಿಸಿದರು   

ಹಾಸನ: ಸಕಲೇಶಪುರ ತಾಲ್ಲೂಕಿನ ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ನೇಮಕಗೊಂಡಿರುವ ಯೋಜನಾ ಆಯೋಗದ ಸದಸ್ಯ ಡಾ.ಕೆ.ಎಸ್.ಕಸ್ತೂರಿರಂಗನ್ ನೇತೃತ್ವದಲ್ಲಿನ ಸಮಿತಿಯು ಗುಂಡ್ಯ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗುಂಡ್ಯದ ರಕ್ಷಿತಾರಣ್ಯದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ 200 ಮೆಗಾವಾಟ್ ಜಲವಿದ್ಯುತ್ ಯೋಜನೆಗೆ ಪರಿಸರವಾದಿಗಳಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ಹಿಂದೆ ಮಾಧವ ಗಾಡ್ಗಿಳ್ ಅಧ್ಯಕ್ಷತೆಯ ಸಮಿತಿ ರಚಿಸಿತ್ತು. ಈ ಸಮಿತಿ ಎರಡು ಮೂರು ಬಾರಿ ಈ ಭಾಗಕ್ಕೆ ಭೇಟಿ ನೀಡಿ, ಜನಸಾಮಾನ್ಯರು ಹಾಗೂ ಪರಿಸರವಾದಿಗಳ ಜತೆ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಪಶ್ಚಿಮಘಟ್ಟದ ಈ ಭಾಗದಲ್ಲಿ ಅಪರೂಪದ ಜೀವ ಸಂಕುಲ ಇರುವುದರಿಂದ ಇಲ್ಲಿ ಜಲವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ ಎಂದು ವರದಿಯಲ್ಲಿ ಸಲಹೆ ನೀಡಲಾಗಿತ್ತು. ಆದರೆ ಸರ್ಕಾರ ಆ ವರದಿಯನ್ನು ತಿರಸ್ಕರಿಸಿ ಯೋಜನಾ ಆಯೋಗದ ಸದಸ್ಯರೂ ಆಗಿರುವ ಡಾ. ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ 9 ಮಂದಿ ಸದಸ್ಯರ ಹೊಸ ಸಮಿತಿ ರಚಿಸಿತ್ತು. ಪಶ್ಚಿಮಘಟ್ಟ ವ್ಯಾಪ್ತಿಯ ಕೆಲವು ರಾಜ್ಯಗಳಲ್ಲಿ ಈಗಾಗಲೇ ಸಂಚರಿಸಿರುವ ಈ ಸಮಿತಿ ಭಾನುವಾರ ಗುಂಡ್ಯ ಜಲವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ಮಾಡಿರುವ ಪ್ರದೇಶಕ್ಕೆ ಭೇಟಿ ನೀಡಿತು.

ಸ್ಥಗಿತಗೊಳಿಸಲು ಮನವಿ: ಉದ್ದೇಶಿತ ಯೋಜನಾ ಸ್ಥಳಕ್ಕೆ ಬಂದ ಸಮಿತಿಯವರಿಗೆ ಮಲೆನಾಡು ಜನಪರ ಹೋರಾಟ ಸಮಿತಿಯವರು, ಕಾಫಿ ಬೆಳೆಗಾರರು, ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಎಕೋ ಕ್ಲಬ್‌ನವರು ಮನವಿ ಸಲ್ಲಿಸಿ, ಯೋಜನೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಯೋಜನಾ ಸ್ಥಳ ಪರಿಶೀಲನೆಯ ಬಳಿಕ ಹಾಸನದ ಸಂತೆಪೇಟೆಯಲ್ಲಿರುವ ಕೆಪಿಟಿಸಿಎಲ್ ಕಚೇರಿ ಸಭಾಂಗಣದಲ್ಲಿ ಕೆಲವು ಅಧಿಕಾರಿಗಳು ಹಾಗೂ ಆಯ್ದ ಕೆಲವು ಪರಿಸರವಾದಿಗಳ ಜತೆಗೆ ತಂಡ ಸಮಾಲೋಚನೆ ನಡೆಸಿತು.

ಸಭೆಯಲ್ಲಿ ಭಾಗವಹಿಸಿದ್ದ ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ಎ. ಕಿಶೋರ್‌ಕುಮಾರ್, ಹೆಮ್ಮಿಗೆ ಮೋಹನ್, ಶಂಕರ ಶರ್ಮ, ಸುರೇಶ್ ಮುಂತಾದವರು ಯೋಜನೆಯಿಂದ ಈ ಭಾಗದ ಅರಣ್ಯ ಹಾಗೂ ಜೀವ ಸಂಕುಲಕ್ಕೆ ಆಗುವ ಹಾನಿಯ ಬಗ್ಗೆ ವಿವರಿಸಿದರು. ಜತೆಗೆ ಈಗಾಗಲೇ ಒಂದು ಸಮಿತಿ ರಚಿಸಿ ವರದಿಯನ್ನೂ ಪಡೆದಿರುವಾಗ ಮತ್ತೆ ಮತ್ತೆ ಸಮಿತಿಗಳನ್ನು ರಚಿಸುವುದರ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ.

ಸಭೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಕಸ್ತೂರಿರಂಗನ್, `ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಅಗತ್ಯ ಮಾಹಿತಿ ಪಡೆದಿದ್ದೇವೆ. ಪರಿಸರವಾದಿಗಳು, ಸ್ಥಳೀಯ ಜನರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದೇವೆ. ಅಧ್ಯಯನದ ಆಧಾರದಲ್ಲಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ' ಎಂದರು.

ದೆಹಲಿ ವಿಶ್ವವಿದ್ಯಾಲಯದ ಪ್ರೊ. ಸಿ.ಆರ್. ಬಾಬು, ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಖಾತೆಯ ಮಾಜಿ ವಿಶೇಷ ಕಾರ್ಯದರ್ಶಿ ಜೆ.ಎಂ. ಮೌಸ್ಕರ್, ಅರಣ್ಯ ಇಲಾಖೆ ಮಾಜಿ ಎಡಿಜಿ  ಡಾ.ಜಗದೀಶ್ ಕಿಶ್ವಾನ್, ಬೆಂಗಳೂರಿನ ಆಯುರ್ವೇದ ಆ್ಯಂಡ್ ಇಂಟಗ್ರೇಟಿವ್ ಮೆಡಿಸಿನ್ ಇನ್‌ಸ್ಟಿಟ್ಯೂಟ್‌ಅಧ್ಯಕ್ಷ ದರ್ಶನ್ ಶಂಕರ್, ಡಾ. ಪಿ.ಎಸ್.ರೇ ಹಾಗೂ ಇರಾನಿ ಚಂದ್ರಶೇಖರ್  ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.