ADVERTISEMENT

ಕಾಡಾನೆ ಹಿಂಡು ಸೃಷ್ಟಿಸಿದ ಆತಂಕ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 10:00 IST
Last Updated 2 ಜೂನ್ 2011, 10:00 IST

ಸಕಲೇಶಪುರ: ತಾಲ್ಲೂಕಿನ ಐಗೂರಿನ ಕಾಫಿ ತೋಟದ ಮನೆಯೊಂದರ ಪಕ್ಕದಲ್ಲಿ 11 ಕಾಡಾನೆಗಳು ಮಂಗಳವಾರ ದಿನವಿಡೀ ಒಂದೇ ಕಡೆ ನಿಂತು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದವು.

ಗ್ರಾಮದ ಕಾಫಿ ಬೆಳೆಗಾರ ಎಂ.ಶ್ರೀಕಾಂತ್ ಅವರ ಮನೆಯಿಂದ 100 ಅಡಿ ಅಂತರದಲ್ಲಿ, ಅವರ ಕಾಫಿ ತೋಟದಲ್ಲಿ ಮಂಗಳವಾರ ಬೆಳಿಗ್ಗೆ 6.30ಕ್ಕೆ 2 ಮರಿ ಆನೆ ಸೇರಿದಂತೆ 11 ಆನೆಗಳು ಕಾಣಿಸಿಕೊಂಡಿವೆ.

ರಾತ್ರಿ ಹೊತ್ತಿನಲ್ಲಿ ಕಾಫಿ ತೋಟ, ಭತ್ತದ ಗದ್ದೆ, ಬಾಳೇ ತೋಟಗಳಲ್ಲಿ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿದ್ದ ಆನೆಗಳು ಈಗ ಜನರ ವಾಸದ ಮನೆಗಳತ್ತ ಹಗಲಲ್ಲೇ ಬಂದಿರುವುದು ಭೀತಿ ಮೂಡಿಸಿದೆ. ಒಂದು ವಾರದಿಂದ ಹಳ್ಳಿಗದ್ದೆ ಪೊನ್ನಮ್ಮ, ಪುಟ್ಟಸ್ವಾಮಿಗೌಡ, ಸತೀಶ್ ಬಿನ್ ನಿಂಗೇಗೌಡ, ಚಿಕ್ಕಂದೂರು ಗ್ರಾಮದ ಮುಕುಂದರಾವ್, ಗಂಗಾಧರ್,  ಸುಬ್ರಮಣ್ಯ ಚನ್ನಯ್ಯ,  ದೊಡ್ಡಯ್ಯ, ಶ್ರೀಕಾಂತ್ ಅವರ ತೋಟದಲ್ಲಿ ಆನೆಗಳು 250ಕ್ಕೂ ಗಿಡಗಳನ್ನು ನಾಶಮಾಡಿವೆ.

ಯಸಳೂರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಓಡಿಸುವ ಯತ್ನ ನಡೆಸಿದ್ದು, ಅವುಗಳು ಸ್ಥಳ ಬಿಟ್ಟು ಕದಲುತ್ತಿಲ್ಲ ಎನ್ನಲಾಗಿದೆ. ಯಸಳೂರು ವಲಯ ಅರಣ್ಯಾಧಿಕಾರಿ ಸತೀಶ್‌ಚಂದ್ರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.