ADVERTISEMENT

ಕಾಫಿ ಬೆಳೆಗಾರರಿಗೆ ಸಬ್ಸಿಡಿ ಯೋಜನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:15 IST
Last Updated 14 ಅಕ್ಟೋಬರ್ 2011, 5:15 IST

ಹಾಸನ: `ಕಾಫಿ ಬೆಳೆಗಾರರು ಕಾರ್ಮಿಕರ ಸಮಸ್ಯೆಯಿಂದ ಬಳಲುತ್ತಿದ್ದು ವ್ಯವಸಾಯವನ್ನು ಯಾಂತ್ರೀಕರಣ ಗೊಳಿಸಲು ಕಾಫಿ ಮಂಡಳಿ ರೈತರಿಗೆ ಬೆಂಬಲ ನೀಡಲು ಯೋಜನೆ ರೂಪಿಸಿದೆ. ಈ ಯೋಜನೆಯಡಿ ಬೆಳೆಗೆ ಅಗತ್ಯವಿರುವ ಯಂತ್ರೋಪಕರಣ ಖರೀದಿಸುವ ರೈತರಿಗೆ ಶೇ 50ರ ವರೆಗೂ ಸಬ್ಸಿಡಿ ನೀಡಲಾಗುತ್ತದೆ~ ಎಂದು ಕಾಫಿ ಮಂಡಳಿಯ ಜಂಟಿ ನಿರ್ದೇಶಕ ಎಂ.ಸಿ. ಪೊನ್ನಣ್ಣ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.

ಗಿಡಗಳ ನಾಟಿ, ಮರುನಾಟಿ, ಮಣ್ಣಿನ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ ಮುಂತಾದ ಕ್ಲಿಷ್ಟಕರ ಕೆಲಸಗಳಿಗೆ ಸಕಾಲದಲ್ಲಿ ಕಾರ್ಮಿಕರು ಲಭಿಸದಿದ್ದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಆದರೆ ಯಂತ್ರಗಳನ್ನು ಬಳಸಿದರೆ ಇಂಥ ಕೆಲಸಗಳನ್ನು ಸಕಾಲದಲ್ಲಿ ಮಾಡಬಹುದು. ಇಂಥ ಯಂತ್ರಗಳನ್ನು ಖರೀದಿಸುವ ರೈತರಿಗೆ ಸಬ್ಸಿಡಿ ನೀಡಲು ಮಂಡಳಿ ಮುಂದಾಗಿದೆ. ಕಳೆದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಒಟ್ಟು 2.1ಕೋಟಿ ರೂಪಾಯಿ ನೆರವು ನೀಡಲಾಗಿತ್ತು.

ಈ ವರ್ಷ ಸೆಪ್ಟೆಂಬರ್‌ವರೆಗೆ ಒಟ್ಟಾರೆ 85ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗಿದೆ. ಇನ್ನಷ್ಟು ರೈತರು ಈ ಯೋಜನೆ ಬಳಸಿಕೊಳ್ಳಬೇಕು ಎಂದರು.

20ಹೆಕ್ಟೇರ್ ಒಳಗಿನ ವಿಸ್ತೀರ್ಣದ ರೈತರಿಗೆ ಗರಿಷ್ಠ 2 ಲಕ್ಷ ರೂಪಾಯಿ ಮೌಲ್ಯದ ಯಂತ್ರೋಪಕರಣ ಖರೀದಿಸಲು ಶೇ 50ರಷ್ಟು ಸಬ್ಸಿಡಿ ನೀಡಲಾಗುವುದು. 20 ಹೆಕ್ಟೇರ್‌ಗಿಂತ ಹೆಚ್ಚು ತೋಟ ಹೊಂದಿರುವವರಿಗೆ 4.5ಲಕ್ಷ ರೂಪಾಯಿ ಮೌಲ್ಯದ ಯಂತ್ರೋಪಕರಣ ಖರೀದಿಗೆ ಶೇ25ರಷ್ಟು ಹಾಗೂ ಸ್ವಸಹಾಯ ತಂಡಗಳು ಮತ್ತು ಸಣ್ಣ ಬೆಳೆಗಾರರ ಒಕ್ಕೂಟದವರಿಗೆ 5 ಲಕ್ಷ ಮೌಲ್ಯದ ಯಂತ್ರೋಪಕರಣ ಖರೀದಿಗೆ ಶೇ50 ಸಬ್ಸಿಡಿ ನೀಡಲಾಗುವುದು ಎಂದರು.

ಯೋಜನೆಯ ಮಾರ್ಗದರ್ಶಿ ಸೂತ್ರಗಳು, ಯಂತ್ರೋಪಕರಣಗಳ ಸರಬರಾಜುದಾರರು ಮತ್ತಿತರ ವಿವರಗಳನ್ನು ಸಂಸ್ಥೆಯ ವೆಬ್‌ಸೈಟ್ ಡಿಡಿಡಿ.ಜ್ಞಿಜಿಚ್ಚಟ್ಛ್ಛಛಿಛಿ.ಟ್ಟಜ ನಲ್ಲಿ ಪ್ರಕಟಿಸಲಾಗಿದೆ. ಕಾಫಿ ಮಂಡಳಿ ಕಚೇರಿ ಯಿಂದಲೂ ಈ ವಿವರಗಳನ್ನು ಪಡೆಯಬಹುದು ಎಂದು ಪೊನ್ನಣ್ಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಉಪ ನಿರ್ದೇಶಕ ಹೇಮಂತ ಕುಮಾರ್ ಹಾಗೂ ಸಂಪರ್ಕಾಧಿಕಾರಿ ಪಿ.ಎಸ್. ಅನಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.