ADVERTISEMENT

ಕಾವೇರಿ ವಿವಾದ: ಪ್ರವಾಸಕ್ಕೆ ಹಿಂದೇಟು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:00 IST
Last Updated 8 ಅಕ್ಟೋಬರ್ 2012, 8:00 IST

ಹಳೇಬೀಡು: ತಾರಕಕ್ಕೇರಿದ ಕಾವೇರಿ ವಿವಾದದಿಂದ ಪ್ರವಾಸಿಗರನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಸುತ್ತಮುತ್ತಲಿನ ವ್ಯಾಪಾರಿಗಳ ಬದುಕು ಈಗ ಮುರಾಬಟ್ಟೆಯಂತಾಗಿದೆ.

ದಸರಾ ರಜೆ ಬಂದಾಕ್ಷಣ ಹೊಯ್ಸಳೇಶ್ವರ ದೇವಾಲಯಕ್ಕೆ ಬರುವ ಪ್ರವಾಸಿಗರ ಹೆಚ್ಚಾಗುತ್ತಿತ್ತು. ಪ್ರವಾಸಿಗರಿಂದಲೇ ಬದುಕು ಕಟ್ಟಿಕೊಂಡ ನೂರಾರು ಮಂದಿ ಬಿಡುವಿಲ್ಲದೆ ದುಡಿಯುತ್ತಿದ್ದರು. ಒಬ್ಬೊಬ್ಬ ವ್ಯಾಪಾರಿಗಳು ಆಕ್ಟೋಬರ್ ತಿಂಗಳಿನಲ್ಲಿ ದಿನವೊಂದಕ್ಕೆ ಕನಿಷ್ಟ ರೂ.1.000 ಸಂಪಾದಿಸು ತ್ತಿದ್ದರು. ಕಾವೇರಿ ಕೂಗು ಹಳೆಮೈಸೂರು ಪ್ರಾತ್ಯ ಮಾತ್ರದಲ್ಲದೆ ರಾಜ್ಯವನ್ನೆ ಆವರಿಸಿರುವುದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ವಾಗಿದೆ. ಹೀಗಾಗಿ ವ್ಯಾಪಾರಿಗಳು ಪ್ರವಾಸಿಗರನ್ನು ಕಾಯುತ್ತ ನಿದ್ದೆಗೆ ಜಾರುವಂತಾಗಿದೆ.

ಪೆಟ್ರೊಲ್, ಡಿಸೆಲ್ ತುಟ್ಟಿಯಾದಗಲೇ ಪ್ರವಾಸಿಗರ ಸಂಖ್ಯೆ ಕಡಿಮೆಯಾಯಿತುತೀಗ ಕಾವೇರಿ ಪ್ರತಿಭಟನೆಯಿಂದ ದಸರ ರಜೆ ಬಂದರೂ ನಮ್ಮನ್ನೂ ಕೇಳುವವರೆ ಇಲ್ಲದಂತಾಗಿದೆ. ಇಂದಲ್ಲ ನಾಳೆ ಪ್ರವಾಸಿಗರು ಬರಬಹುದು ಎಂದು ಕಾಯುತ್ತಿದ್ದ ನಮ್ಮ ನಿರೀಕ್ಷೆ ಹುಸಿಯಾಗುತ್ತಿದೆ ಪರಮೇಶ್ ಹಾಗೂ ಬಾಬು ಅವರ ಅಳಲು.

ಎಳನೀರು, ತಂಪು ಪಾನೀಯ, ಕಾಫಿ, ಚಹಾ ಸೌತೆಕಾಯಿ ಹಣ್ಣುಹಂಪಲು ಮೊದಲಾದ ತಿನಿಸು ಗಳು ಮಾತ್ರವಲ್ಲದೆ, ಬ್ರಾಸ್ ಹಾಗೂ ಬಳಪದ ಕಲ್ಲಿನಲ್ಲಿ ಕೆತ್ತಿದ ವಿಗ್ರಹ, ಪ್ರವಾಸಿ ಚಿತ್ರಗಳು, ಮಕ್ಕಳ ಆಟಿಕೆಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡಿ ನೂರಾರು ಮಂದಿ ಜೀವನ ಕಂಡುಕೊಂಡಿದ್ದಾರೆ ಅವರೆಲ್ಲ ಬೇರೆ ಉದ್ಯೋಗ ಗೊತ್ತಿಲ್ಲದೆ ನಾಳೆಯ ಬಗ್ಗೆ ಚಿಂತಿಸುತ್ತಿದ್ದಾರೆ. ಪ್ರವಾಸಿಗರು ಕೊಡುವ ಹಣವನ್ನೆ ನಂಬಿರುವ ಮಾಸಿಕ ವೇತನ ಇಲ್ಲದ ಮಾರ್ಗದರ್ಶಿಗಳು ಪ್ರವಾಸಿಗರಿಗಾಗಿ ಬರುವಿಕೆಗಾಗಿ ಚಡಪಡಿಸುತ್ತಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮ(ಕೆಎಸ್‌ಟಿಡಿಸಿ) ಆಡಳಿತದ ಹೊಟೇಲ್ ಶಾಂತಲಾ ಮಯೂರದಲ್ಲಿಯೂ ವ್ಯಾಪಾರ ಕುಸಿದಿದೆ. ಇಲ್ಲಿರುವ ನಾಲ್ಕು ಕೊಠಡಿಗೂ ಪ್ರವಾಸಿಗರಿಲ್ಲದಂತಾಗಿದೆ. ಕಾವೇರಿ ಗಲಾಟೆಯಿಂದ ಪ್ರವಾಸೊದ್ಯಮಕ್ಕೆ ತಡೆಯಲಾರದ ಪೆಟ್ಟುಬಿದ್ದಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.