ADVERTISEMENT

ಕೀಳರಿಮೆ ತೊರೆಯಲು ಅಂಗವಿಕಲರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 5:45 IST
Last Updated 23 ಜನವರಿ 2012, 5:45 IST

ಹಾಸನ: `ನಾವು ಮಾಡಬೇಕಾದ ಕಾರ್ಯವನ್ನು ಸರಿಯಾಗಿ ಮಾಡಿದರೆ ಕೊಡುವವನು ಬೇಕಾದಷ್ಟನ್ನು ಕೊಡುತ್ತಾನೆ. ಜಗತ್ತನ್ನು ಬದಲಿಸಲು ಯಾರಿಂದಲೂ ಆಗದು ನಾವೇ ಬದಲಾದರೆ ಜಗತ್ತು ಬದಲಾಗುತ್ತದೆ~ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ನುಡಿದರು.
ನಗರದ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ `ವಿಪ್ರ ಸ್ನೇಹ-ಸೌಹಾರ್ದ ಕೂಟ- 2012~ರಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

`ಅಂಗವಿಕಲರು ಮೊದಲು ಕೀಳರಿಮೆ ಬಿಡಬೇಕು. ಸಮಾಜ ನಮ್ಮನ್ನು ಪ್ರೀತಿಸುವುದಿಲ್ಲ ಎಂದು ಹಲುಬುವುದರಲ್ಲಿ ಅರ್ಥವಿಲ್ಲ. ನಾವು ಕೀಳರಿಮೆ ಬಿಟ್ಟರೆ ಸಮಾಜ ನಮ್ಮನ್ನು ಅಪ್ಪಿಕೊಳ್ಳುತ್ತದೆ. ಇದಕ್ಕೆ ಆತ್ಮವಿಶ್ವಾಸದಿಂದ ಮುನ್ನುಗುವುದು ಮುಖ್ಯ. ಇಂಥವರಿಗೆ ಸಮಾಜ ನೆರವು ನೀಡಿಯೇ ನೀಡುತ್ತದೆ.
 
ಸರ್ಕಾರ ನಮಗೆ ಸೂಕ್ತ ನೆರವು ನೀಡಿಲ್ಲ    ಎಂಬ ಕೊರಗಿನ ನಡುವೆಯೇ ನಾನು ಅಂಗವಿಕಲರಿಗಾಗಿ ಏನು ಮಾಡಿದ್ದೇನೆ ಎಂದು ನನ್ನನ್ನೇ ಪ್ರಶ್ನಿಸಿದ ಪರಿಣಾಮ ಒಂದು ಟ್ರಸ್ಟ್ ಹುಟ್ಟಿಕೊಂಡಿತು. ಈಗ ನನ್ನ ಟ್ರಸ್ಟ್ 15 ಮಂದಿ ಅಂಗವಿಕಲರಿಗೆ ನೆರವಾಗಿದೆ. ಸಮಾಜ ಕೈಜೋಡಿಸಿದರೆ ಕೆಲವೇ ವರ್ಷಗಳಲ್ಲಿ ನೂರು  ಅಂಗವಿಕಲರಿಗೆ ನೆರವಾಗಬೇಕು ಎಂಬ ಉದ್ದೇಶವಿದೆ~ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ  ಸಿ.ಎಸ್. ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
 ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.