ADVERTISEMENT

ಕುಡಿಯುವ ನೀರು: ಸದಸ್ಯರ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 6:55 IST
Last Updated 17 ಜೂನ್ 2011, 6:55 IST

ಚನ್ನರಾಯಪಟ್ಟಣ: ನಡಾವಳಿ ಹಾಗೂ ಕುಡಿಯುವ ನೀರು ಸರಬರಾಜು ವಿಚಾರ ಪುರಸಭೆಯ ವಿಶೇಷ ಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿ, ಆಡಳಿತರೂಢ ಜೆಡಿಎಸ್ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಇದರಿಂದ ಬೇಸತ್ತ ಶಾಸಕ ಸಿ.ಎಸ್.ಪುಟ್ಟೇಗೌಡ ಅವರು ಸಭೆಯಿಂದ ಹೊರ ನಡೆಯಲು ಮುಂದಾದರು.

ಪುರಸಭಾಧ್ಯಕ್ಷೆ ಅನುಸೂಯ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ನಡಾವಳಿಯಲ್ಲಿ ಸೇರಿಸಬೇಕಾದ ವಿಷಯಗಳ ಬಗ್ಗೆ ಕೂಲಂಕಶವಾಗಿ ಚರ್ಚಿಸದೇ ಅಧ್ಯಕ್ಷರು, ಏಕಪಕ್ಷೀಯವಾಗಿ ನಿರ್ಧಾರ ಕೈ ಗೊಳ್ಳುತ್ತಿದ್ದಾರೆ. ಏನಾದರು ಕೇಳಲು ಮುಂದಾದರೆ ಶಾಸಕರು, ತಮ್ಮನ್ನು ಪುರಸಭಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ನಾನು ಹೇಳಿದಂತೆ ಆಗಬೇಕು ಎಂದು ಅಧ್ಯಕ್ಷರು ವರ್ತಿಸುತ್ತಾರೆ ಎಂದು ಸದಸ್ಯ ರವೀಶ್ ದೂರಿದರು.

ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅನುಸೂಯ ಪ್ರಕಾಶ್, ತಾವು ಆ ರೀತಿ ಹೇಳಿಲ್ಲ  ಎಂದು ಸಮರ್ಥಿಸಿಕೊಂಡರು. ಕುಡಿಯುವ ನೀರಿಗೆ ತೊಂದರೆಯಾಗಿದೆ. ಈ ಬಗ್ಗೆ ಅಧ್ಯಕ್ಷರಾಗಲಿ ಅಥವಾ ಮುಖ್ಯಾಧಿಕಾರಿಯಾಗಲಿ ಸದಸ್ಯರನ್ನು ಕರೆದು ಚರ್ಚಿಸಿಲ್ಲ. ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಕಾರಣದಿಂದ ಸದಸ್ಯರನ್ನು, ಜನತೆ ಪ್ರಶ್ನಿಸುತ್ತಾರೆ ಎಂದು ಸದಸ್ಯ ಸಿ.ಕೆ.ಗೋಪಾಲಕೃಷ್ಣ, ಅಸಮಾಧಾನ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಸದಸ್ಯ ಪರಮೇಶ್ ಮಾತನಾಡುತ್ತಿದ್ದಂತೆ, ಗೋಪಾಲಕೃಷ್ಣ ಮತ್ತು ರವೀಶ್ ಅವರು, ಪರಮೇಶ್ ಜೊತೆ ವಾದಕ್ಕಿಳಿದರು.  ಮಾತಿನ ಸಂಘರ್ಷ ಜೋರಾದಾಗ ಶಾಸಕರು, ಸದಸ್ಯರನ್ನು ಸುಮ್ಮನಿರುವಂತೆ ಕೇಳಿ ಕೊಂಡರು. ಆದರೆ ಅದು ಸಫಲವಾಗ ದಿದ್ದಾಗ ಬೇಸತ್ತು ಸಭೆಯಿಂದ ಹೊರ ನಡೆಯಲು ಮುಂದಾದರು.

ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ,  ಸದಸ್ಯರು ಗುಂಪುಗಾರಿಕೆ ಬಿಟ್ಟು, ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಚಿಂತಿಸಬೇಕು.  ಇಲ್ಲದಿದ್ದರೆ ಸದಸ್ಯರ ನಡವಳಿಕೆಯಿಂದ ಜನತೆ ಅಸಹ್ಯ ಪಟ್ಟುಕೊಳ್ಳುತ್ತಾರೆ ಎಂದರು.

ಅಧ್ಯಕ್ಷ, ಮುಖ್ಯಾಧಿಕಾರಿಗಳು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಮ ಬದ್ದವಾಗಿ ಕೆಲಸ ನಿರ್ವಹಿ ಸಬೇಕು ಎಂದು ಕಿವಿ ಮಾತು ಹೇಳಿದರು. ಸದಸ್ಯ ನಂಜುಂಡ ಮೈಮ್ ಮಾತನಾಡಿ,  ಪಟ್ಟಣದ ವ್ಯಾಪ್ತಿಯಲ್ಲಿ ರುವ ಧನಲಕ್ಷ್ಮೀ, ಬಾಲಾಜಿ ಚಿತ್ರಮಂದಿರಗಳು, ತಿರುಮಲ ರೈಸ್ ಮಿಲ್, ಪುರಸಭೆಯಿಂದ ಅನುಕೂಲ ಪಡೆದಿದೆ. ಆದರೆ ಡಿ.ಕಾಳೇನಹಳ್ಳಿ ಗ್ರಾ.ಪಂ.ಗೆ ಕಂದಾಯ ಪಾವತಿಸುತ್ತಿವೆ. ಹಲವು ವರ್ಷಗಳಿಂದ ಇದರ ಬಗ್ಗೆ ಗಮನ ಸೆಳೆದರು, ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದರು.

ಜನಪ್ರತಿನಿಧಿಗಳ ಜೊತೆ ಸೌಜನ್ಯದಿಂದ ವರ್ತಿಸುವಂತೆ ಅಧಿಕಾರಿಗೆ ಶಾಸಕರು ಹೇಳಿದರು.
ಪುರಸಭಾಧ್ಯಕ್ಷೆ ಅನುಸೂಯ ಪ್ರಕಾಶ್, ಉಪಾಧ್ಯಕ್ಷ ಸಿ.ಎನ್. ಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್‌ಗೌಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.