ಅರಕಲಗೂಡು: ಲಂಡನ್‌ನಲ್ಲಿ ನಡೆದ ಪ್ಯಾರಾ ಲಿಂಪಿಕ್ಸ್‌ನಲ್ಲಿ ತಾಲ್ಲೂಕಿನ ಎಚ್.ಎನ್.ಗಿರೀಶ್ ಬೆಳ್ಳಿ ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದ ಬೆನ್ನಲ್ಲೆ ತಾಲ್ಲೂಕಿನ ಮತ್ತೊಬ್ಬ ಯುವಕ ಅಮೆರಿಕದಲ್ಲಿ ನಡೆಯಲಿರುವ ಕುಬ್ಜರ ಒಲಿಂಪಿಕ್‌ಗೆ ಆಯ್ಕೆಗೊಂಡಿದ್ದಾರೆ.
ತಾಲ್ಲೂಕಿನ ಶಾಂತಕುಮಾರ್ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಬ್ಜರ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕ ಪಡೆದಿದ್ದು, ಈಗ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೂ ಆಯ್ಕಗೊಂಡಿದ್ದಾರೆ.
ಅಮೆರಿಕದಲ್ಲಿ ಆ 2 ರಿಂದ 13ರವರೆಗೆ ನಡೆಯುವ ಕುಬ್ಜರ ಒಲಿಂಪಿಕ್‌ನಲ್ಲಿ 60 ಮೀಟರ್, 100 ಮೀಟರ್, 200 ಮೀಟರ್ ಓಟದ ಸ್ಪರ್ಧೆಗಳು ಹಾಗೂ 400 ಮೀಟರ್ ರಿಲೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಶಾಂತಕುಮಾರ್ ಕೊಳ್ಳಂಗಿ ಗ್ರಾಮದ ರಾಜಶೆಟ್ಟಿ ಅವರ ಪುತ್ರ. ಪಿ.ಯು.ಸಿ. ವರೆಗೆ ವ್ಯಾಂಸಗ ಮಾಡಿರುವ ಇವರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ ಗೌರವಧನಕ್ಕೆ ದುಡಿಯುತ್ತಿದ್ದಾರೆ.
ಬಡತನದಲ್ಲಿ ಬೆಳೆದ ಇವರಿಗೆ ದೈಹಿಕ ಅಂಗವಿಕಲತೆ ಇದ್ದರೂ ವಿಚಲಿತರಾಗದೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ. ತಾಲ್ಲೂಕು ಅಂಗವಿಕಲರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೂಲಿ ಕಾರ್ಮಿಕರಾದ ಇವರ ಪೋಷಕರಿಗೆ ಮಗನ ಸಾಧನೆ ಹೆಮ್ಮೆ ತಂದಿದ್ದರೂ ಆತನಿಗೆ ಸೂಕ್ತ ಸಂಪನ್ಮೂಲದ ನೆರವು ನೀಡಲು ಸಾಧ್ಯವಾಗುತ್ತಿಲ್ಲ.
`ಅಮೆರಿಕ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚ ತಗುಲಲಿದೆ. ಸರ್ಕಾರ ಪ್ರಯಾಣ ವಸತಿಯ ವ್ಯವಸ್ಥೆ ಕಲ್ಪಿಸಿದರೂ ಉಳಿದ ಖರ್ಚಿಗೆ ಹಣವಿಲ್ಲದೆ ಪರದಾಡುವ ಸ್ಥಿತಿ ಇದೆ. ದಾನಿಗಳು ಸಹಾಯ ಮಾಡಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.