ADVERTISEMENT

ಕೃಪೆ ತೋರದ ವರುಣ: ಒಣಗಿದ ಬೆಳೆ

​ಪ್ರಜಾವಾಣಿ ವಾರ್ತೆ
Published 28 ಮೇ 2012, 5:15 IST
Last Updated 28 ಮೇ 2012, 5:15 IST

ಅರಸೀಕೆರೆ: ತಾಲ್ಲೂಕಿನಲ್ಲಿ ವರುಣ ಕೃಪೆ ತೋರಿಲ್ಲ. ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಮಾಡಿರುವ ಮುಂಗಾರು ಬೆಳೆಗಳಾದ ಹೆಸರು, ಎಳ್ಳು, ಉದ್ದು, ಜೋಳ, ಸೂರ್ಯಕಾಂತಿ, ಅಲಸಂದೆ ಹರಳು ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ.

20 ದಿನಗಳಿಂದ ಮಳೆರಾಯನ ಪತ್ತೆಯೇ ಇಲ್ಲವಾಗಿ ಬೇಸಿಗೆಯ ದಿನಗಳನ್ನು ನೆನಪಿಸುವ ಬಿಸಿಲಿನ ಪ್ರಖರತೆ ಕಾಣಿಸಿಕೊಂಡು ಕೃಷಿಕ ಸಮುದಾಯದಲ್ಲಿ ಬರದ ಭೀತಿ ಆವರಿಸಿದೆ. ಮುಂಗಾರಿನಲ್ಲಿ ಭರವಸೆ ಹುಟ್ಟಿಸಿ ರೈತನ ಮೂಗಿಗೆ ತುಪ್ಪ ಸವರಿ ಮುಗಿಲು ಸೇರಿದ ಮಳೆ ಬಯಲು ಸೀಮೆಯಲ್ಲಿ ನಾಪತ್ತೆಯಾಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಮಳೆಯಿಲ್ಲದೆ ಹಾಗೂ ಭೂಮಿಯಲ್ಲಿ ತೇವಾಂಶವಿಲ್ಲದೆ ಬಾಡಲಾರಂಬಿಸಿದ್ದು ಮುಂದೇನು ಎಂದು ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಈ ಮಳೆ ಕೈಕೊಟ್ಟರಂತೂ ತಾಲ್ಲೂಕಿನ ಕೃಷಿ ಚಟುವಟಿಕೆ ಮೇಲೆ ಬಾರೀ ಹೊಡೆತ ಬೀಳಲಿದೆ. ಈಗ ಹೆಸರು,ಉದ್ದು,ಎಳ್ಳು ಹೂವು ಕಟ್ಟುವ ಕಾಲವಾದ್ದರಿಂದ ಭೂಮಿಯಲ್ಲಿ ತೇವಾಂಶ ಬಹಳ ಮುಖ್ಯ.   ಈ ಅವಧಿ ಯಲ್ಲೇ ಮಳೆ ಕೈಕೊಟ್ಟಿರುವುದರಿಂದ ಮುಂಗಾರು ಬೆಳೆ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಈ ವಾರದಲ್ಲಿ ಮಳೆ ಬೀಳದಿದ್ದರೆ ರೈತರು ಬೆಳೆ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ.

ಮಳೆಗಾಗಿ ರೈತರು ಪ್ರತಿನಿತ್ಯ ಮುಗಿಲು ನೋಡುತ್ತಿದ್ದಾರೆ. ಮುಂಗಾ ರಿನ ಮೇಲೆ ಬಾರೀ ನಿರೀಕ್ಷೆಯಿ ಟ್ಟುಕೊಂಡಿದ್ದ ಕೃಷಿಕರು ಇದ್ದಬದ್ದ ಹಣ ಖರ್ಚು ಮಾಡಿ ಭೂಮಿ ಹಸನು ಮಾಡುವುದು , ಬೆಳೆಯಲ್ಲಿ ಕಳೆ ತೆಗೆಯಲು ಕುಂಟೆ ಹೊಡೆಯುವುದು ಸೇರಿದಂತೆ ಬೆಳೆ ಹಸನು ಮಾಡಲು ತಯಾರಿ ನಡೆಸಿದ್ದ. ಆದರೆ, ಮಳೆ ಬಾರದೆ ಇರುವುದರಿಂದ ತೀವ್ರ ಕಂಗಾಲಾಗಿದ್ದರೆ.

ತಾಲ್ಲೂಕಿನಲ್ಲಿ ಬಹುತೇಕ ಕೆರೆ-ಕಟ್ಟೆ ಹಾಗೂ ಹಳ್ಳಗಳಲ್ಲಿ ನೀರಿಲ್ಲ. ಕೆರೆ ಕಟ್ಟೆಗಳ ಒಡಲುಗಳಂತೂ ನೀರಿಲ್ಲದೆ ಭಣಗುಡುತ್ತಿವೆ,ಮುಂದಿನ  ದಿನಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರೆತೆ ಯುಂಟಾಗುವ ಭೀತಿ ಯುಂಟಾಗಿದೆ.
 
ಈಗಾಗಲೇ ಜಾನುವಾರುಗಳಿಗೆ ಮೇವಿನ ಕೊರತೆಯಿಂದ ಕಟುಕರ ಮನೆ ಬಾಗಿಲ ಕದ ತಟ್ಟುವಂತಾಗಿ ದೆ.ಈಗ ಮಳೆ ಗಾಲದ ಮೋಡಗಳ ವಾತಾವರಣ ವಿದ್ದರೂ ನಿರಂತರ ಬೀಸುತ್ತಿರುವ ಗಾಳಿಯ ಹೊಡೆತಕ್ಕೆ ಮಳೆ ಸುರಿಸದೇ ಮುಂದೆ ಸಾಗುತ್ತಿವೆ.  ರೈತರು ಕೃಷಿ ಕೂಲಿ ಕಾರ್ಮಿಕರಿಗೆ ಕೈಗೆ ಕೆಲಸವಿಲ್ಲದೆ ಈಗಾಗಲೇ ಉದ್ಯೋಗ ಅರಸಿ ಪಟ್ಟಣದ ಕಡೆ ವಲಸೆ ಆರಂಭಿಸಿದ್ದಾರೆ.

ಮೇ ತಿಂಗಳಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಬಿಸಿಲಿನ ಪ್ರಖರತೆಗೆ ಒಣಗಿದ್ದು, ಮಳೆಯ ಹನಿಗಾಗಿ ಬಾಯ್ತೆರೆದು ಮುಗಿಲಿನಿಂದ ಬೀಳುವ ಮಳೆಯ ಹನಿಗಾಗಿ ಕಾಯುತ್ತಿರುವ ದೃಶ್ಯ ರೈತರನ್ನು ಕಂಗೆಡಿಸಿದೆ.

ಸರ್ಕಾರಗಳು ವಿಫಲ: ತಾಲ್ಲೂಕಿನಲ್ಲಿ ಬರಗಾಲ ಘೋಷಣೆಯಾಗಿದ್ದರೂ ಸರ್ಕಾರ ರೈತರಿಗೆ, ಕೂಲಿ ಕಾರ್ಮಿಕರಿಗೆ ಬಡವರಿಗೆ ಆಸರೆಯಾಗುವಂತಹ ಯೋಜನೆಗಳ ನ್ನು ಜಾರಿಗೆ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.