ADVERTISEMENT

ಕೆಡಿಪಿ ಸಭೆ: ಅಧಿಕಾರಿಗಳಿಗೆ ಶಾಸಕರ ತರಾಟೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 4:35 IST
Last Updated 25 ಜನವರಿ 2012, 4:35 IST

ಅರಸೀಕೆರೆ: ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಿ ಮತ್ತು ಬರ ಅಧ್ಯಯನ ಅಧಿಕಾರಿಗಳ ತಂಡ ಭೇಟಿ ನೀಡಿ ತಿಂಗಳುಗಳೇ ಕಳೆದಿದ್ದರೂ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಇಲಾಖೆಯಲ್ಲಿ ಪ್ರಗತಿಯಾಗಿದೆ ಎಂದು ಸುಳ್ಳು ಅಂಕಿ-ಅಂಶಗಳನ್ನು ನೀಡುವುದು ಬೇಡ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧಿಕಾರಿಗಳನ್ನು ಸೋಮವಾರ ತರಾಟೆಗೆ ತೆಗೆದುಕೊಂದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ನಾಯಕ್  ಈ ವರ್ಷ ಮಳೆ ಅಭಾವದಿಂದ ಬಿತ್ತನೆ ಮಾಡಿದ ಮುಂಗಾರು ಹಾಗೂ ಹಿಂಗಾರು ಬೆಳೆಗಳು ರೈತರ ಕೈಸೇರದೇ 24 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಹೇಳುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಶಾಸಕರು ಮಳೆ ಅಭಾವದಿಂದ ಬೆಳೆ ನಷ್ಟವಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
 
ಅವರಿಗೆ ಇಲಾಖೆ ವತಿಯಿಂದ ಏನು ಪರಿಹಾರ ಕೊಟ್ಟಿದ್ದೀರಾ ಹೇಳಿ? ಎಂದು ಪ್ರಶ್ನಿಸಿದಾಗ ತಾಲ್ಲೂಕಿನ ಆನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಜನತೆ ಹಾಹಾಕಾರ ಪಡುತ್ತಿದ್ದಾರೆ, ಕುಡಿಯುವ ನೀರು ಪೂರೈಕೆಗೂ ಸರ್ಕಾರ ಹಣ ಬಿಡುಗಡೆ ಮಾಡಿದಿರುವ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿದರು.

ಕೃಷಿ ಇಲಾಖೆಯಲ್ಲಿ ರಿಯಾಯ್ತಿ ದರದಲ್ಲಿ ರೈತರಿಗೆ ನೀಡುತ್ತಿರುವ ಉಪಕರಣಗಳು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಪರಿಕರಗಳು ದೊರೆ ಯುತ್ತವೆ. ಅದೇ ಪರಿಕರಗಳು ಶೇ.75ರಷ್ಟು ರಿಯಾಯ್ತಿ ದರದಲ್ಲಿ ದುಪ್ಪಟ್ಟು ಬೆಲೆಗೆ ಕೊಡಲಾಗುತ್ತದೆ. ವಿಶೇಷ ಎಂದರೆ ರಿಯಾಯ್ತಿ ದರ ಎಲ್ಲೋ ಕುಳಿತಿರುವ ಕಂಪನಿ ಮಾಲೀಕರಿಗೆ ಸಿಗುತ್ತದೆ. ಇದರಿಂದ ರೈತರ ಶೋಷಣೆಯಾಗುತ್ತದೆಯೇ ಹೊರತು ಯಾವುದೇ ಅನುಕೂಲವಾಗುವುದಿಲ್ಲ ಎಂದು ಅವರು ಹೇಳಿದರು.

ಇದೇ ರೀತಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ರೈತರಿಗೆ ವಿತರಿಸಲಾಗುತ್ತಿರುವ ಸಸಿಗಳ ಬೆಲೆಯು 12.80 ರೂಪಾಯಿ ದರದಲ್ಲಿ ಲೆಕ್ಕ ಹಾಕಿ ನೀಡಲಾಗುತ್ತಿದೆ. ಆದರೆ ಇದೇ ಸಸಿಗಳನ್ನು ಖಾಸಗಿಯವರಿಂದ 1ರೂಪಾಯಿಗೆ ಖರೀದಿ ಮಾಡಿ ಇಲ್ಲಿಯೂ ಸಹ ಹಣ ದುರ್ಬಳಕೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಅಲ್ಲದೆ ಶಿಶು ಅಭಿವೃದ್ಧಿ ಯೋಜನೆ ಮೂಲಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಟಿಕಾಂಶದ ಹೆಸರಿನಲ್ಲಿ ನೀಡುವ ಆಹಾರವನ್ನು ಸ್ಥಳೀಯ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರೇ ತಯಾರಿಸಿಕೊಡಬೇಕು ಎಂದು ಸುಪ್ರಿಂಕೋರ್ಟ್ ಆದೇಶ ಇದ್ದರೂ ಅದನ್ನು ಉಲ್ಲಂಘಿಸಿ ಚನ್ನೈ ಮೂಲದ ಗುತ್ತಿಗೆದಾರರಿಂದ ಒಂದು ಕೆ.ಜಿಗೆ 41 ರೂಪಾಯಿನಲ್ಲಿ ಖರೀದಿಸಿ ವಿತರಿಸಲಾಗುತ್ತಿದೆ.

ಆದರೆ ಆಹಾರ ಪದಾರ್ಥವನ್ನು ಪ್ಯಾಕ್ ಮಾಡುವ ಕೆಲಸವನ್ನು ಮಾತ್ರ ಹಾಸನ ಜಿಲ್ಲೆಯ ಮಹಿಳಾ ಸಂಘಗಳ ಸದಸ್ಯೆಯರಿಗೆ ನೀಡಿ ವಾರ್ಷಿಕವಾಗಿ 750ರಿಂದ 800 ಕೋಟಿ ರೂಪಾಯಿ ಲೂಟಿ ಹೊಡೆಯಲಾಗುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಜಿ.ಪಂ ಸದಸ್ಯರಾದ ಕೃಷ್ಣನಾಯಕ್, ಪಾರ್ವತಮ್ಮ, ರತ್ನಮ್ಮ, ಬಿಜೆಪಿ ನಾಮ ನಿದೇಶೀತ ಸದಸ್ಯರಾದ ಜಾವಗಲ್ ಇಂದ್ರೇಶ್, ಸೌಭಾಗ್ಯಮ್ಮ, ಇಓ ಎಚ್.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.