ADVERTISEMENT

ಕೋಡಿ ಬಿದ್ದ ದೊಡ್ಡಕೊಂಡಗೊಳ ಕೆರೆ

ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ; ಮಳೆಯಿಂದ ಕೃಷಿಕರಿಗೆ ಹರ್ಷ, ಪುನಶ್ಚೇತನಗೊಂಡ ಕೆರೆಗಳಿಗೂ ನೀರು

​ಪ್ರಜಾವಾಣಿ ವಾರ್ತೆ
Published 30 ಮೇ 2018, 12:56 IST
Last Updated 30 ಮೇ 2018, 12:56 IST
ದೊಡ್ಡಕೊಂಡಗೊಳ ಬಾಲಬಾವಿಯಲ್ಲಿ ಮಕ್ಕಳು ಈಜಾಡುತ್ತಿರುವ ದೃಶ್ಯ
ದೊಡ್ಡಕೊಂಡಗೊಳ ಬಾಲಬಾವಿಯಲ್ಲಿ ಮಕ್ಕಳು ಈಜಾಡುತ್ತಿರುವ ದೃಶ್ಯ   

ಹಾಸನ: ಜಿಲ್ಲೆಯ ವಿವಿಧೆಡೆ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷಿ ಹೊಂಡ, ಚೆಕ್ ಡ್ಯಾಂ, ಕೆರೆಗಳಿಗೆ ನೀರು ಹರಿದು ಬರುತ್ತಿದೆ.

ಎರಡು ಮೂರು ದಿನದಿಂದ ಎಡಬಿಡದೆ ಮಳೆ ಸುರಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಚಿಕ್ಕಹೊನ್ನೇನಹಳ್ಳಿ ಕೆರೆ, ಚಿಕ್ಕಕೊಂಡಗೊಳ ಕೆರೆ, ಸೀಗೆ ಕೆರೆ, ಚನ್ನಪಟ್ಟಣ ಕೆರೆ, ಸತ್ಯಮಂಗಲ ಕರೆ, ಹಂದಿನ ಕೆರೆಗೆ ನೀರು ಹರಿದು ಬಂದಿದ್ದು, ಶೇಕಡಾ 60 ರಷ್ಟು ನೀರು ಶೇಖರಣೆಯಾಗಿದೆ. ದೊಡ್ಡಕೊಂಡಗೊಳ ಕೆರೆ ಕೋಡಿ ಬಿದ್ದಿದೆ. ಅರಿಸಿನ ಕಲ್ಯಾಣಿ, ಬಾಲಬಾವಿಯಲ್ಲೂ ನೀರು ಸಂಗ್ರಹವಾಗಿದ್ದು, ಮಕ್ಕಳು ಈಜಾಡುತ್ತಿದ್ದಾರೆ.

ತಾಲ್ಲೂಕಿನ ಸಾಲಗಾಮೆ, ನಿಟ್ಟೂರು, ಉದ್ದೂರು, ಶಾಂತಿಗ್ರಾಮ, ದುದ್ದ, ಕಂದಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ರೈತರು ಕೋಸು, ಮುಸುಕಿನ ಜೋಳ, ಆಲೂಗೆಡ್ಡೆ, ರಾಗಿ, ಅವರೆ, ಟೊಮೆಟೊ, ನೆಲಗಡಲೆ, ಹಸಿರು ಮೆಣಸಿನಕಾಯಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಇತರೆ ಬೆಳೆ ಬೆಳೆಯಲು ಭೂಮಿ ಹದ ಮಾಡುತ್ತಿದ್ದು, ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿರುವುದು ರೈತರಲ್ಲಿ ಮೊಗದಲ್ಲಿ ಸಂತಸ ತಂದಿದೆ.

ADVERTISEMENT

‘ಈ ಬಾರಿ ಮುಂಗಾರು ಉತ್ತಮವಾಗಿದ್ದು, ಮಳೆ ಇದೇ ರೀತಿ ಮುಂದುವರೆದರೆ ಕೆರೆ ಕಟ್ಟೆಗಳಲ್ಲಿ ನೀರು ತುಂಬಿ ಬೆಳೆಗಳು, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ತೊಂದರೆ ಉಂಟಾಗುವುದಿಲ್ಲ’ ಎನ್ನುತ್ತಾರೆ ಸಾಲಗಾಮೆಯ ರೈತ ರಾಮೇಗೌಡ.

ಹಸಿರು ಭೂಮಿ ಪ್ರತಿಷ್ಠಾನ ಕಳೆದ ವರ್ಷ ತಾಲ್ಲೂಕಿನ ಹಲವು ಕೆರೆಗಳು ಮತ್ತು ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಹಾಗಾಗಿ ಹಾಸನ ತಾಲ್ಲೂಕಿನ ದೊಡ್ಡಕೊಂಡಗೊಳ ಕೆರೆ, ಕಲ್ಯಾಣಿಗಳು, ತಿರುಪತಿ ಹಳ್ಳಿ, ಗೋ ಕಟ್ಟೆ, ಸಕಲೇಶಪುರದ ಬ್ಯಾಕರವಳ್ಳಿಯ ಓದಯ್ಯನ ಕೆರೆಯಲ್ಲಿ ನೀರು ಸಂಗ್ರಹ ತುಂಬಿದೆ. ಗವೇನಹಳ್ಳಿ ಕೆರೆಗೂ ಎರಡು ಅಡಿ ನೀರು ಬಂದಿದೆ.

‘ಜಿಲ್ಲೆಯಲ್ಲಿ 35 ಕಲ್ಯಾಣಿಗಳ ಪುನಶ್ಚೇತನ ಮಾಡಲಾಗಿದ್ದು, ಈಗ ಅವುಗಳಲ್ಲಿ ನೀರು ಶೇಖರಣೆಯಾಗಿದೆ. ಪ್ರತಿನಿತ್ಯ 400 ರಿಂದ 500 ಹಸುಗಳು ನೀರು ಕುಡಿದು ಹೋಗುತ್ತಿವೆ. ದೊಡ್ಡಕೊಂಡಗೊಳ ಕೆರೆ ಮಕ್ಕಳಿಗೆ ಈಜುಕೊಳವಾಗಿದೆ’ ಎಂದು ಹಸಿರು ಭೂಮಿ ಪ್ರತಿಷ್ಠಾನದ ರೂಪ ಹಾಸನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.