ADVERTISEMENT

ಗ್ರಾ.ಪಂಗೆ ಕಟ್ಟಡ ಹಸ್ತಾಂತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 7:20 IST
Last Updated 14 ಫೆಬ್ರುವರಿ 2011, 7:20 IST

ಹಳೇಬೀಡು: ಪಟ್ಟಣದ ಮುಖ್ಯರಸ್ತೆಯಲ್ಲಿ ಹಾವು ಮೊದಲಾದ ಕ್ರಿಮಿ ಕೀಟಗಳ ವಾಸಸ್ಥಾನವಾಗಿರುವ ಪೊಲೀಸ್ ಇಲಾಖೆಗೆ ಸೇರಿದ ಪಾಳು ಕಟ್ಟಡವನ್ನು ಗ್ರಾಮ ಪಂಚಾಯತಿಗೆ ವಹಿಸಿ ಗ್ರಂಥಾಲಯ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪೊಲೀಸ್ ಉಪಠಾಣೆ ಮೇಲ್ದರ್ಜಗೆ ಪರಿವರ್ತ ನೆಯಾದ ನಂತರ ನೂತನ ಠಾಣೆಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಕೆಲ ವರ್ಷ ಗಳ ನಂತರ ಗ್ರಾಮ ಪಂಚಾಯತಿಯಿಂದ ನಿವೇಶನ ಪಡೆದು ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾ ಯಿತು. ಆದರೆ ಹಳೇಯ ಕಟ್ಟಡದ ಸ್ಥಿತಿಗತಿ ನೋಡು ವರಿಲ್ಲದೆ, ಅಕ್ಷರಶಹಃ ಅಸ್ತಿಪಂಜರದಂತಾಗಿದ್ದು, ಅವನತಿ ಹೊಂದುತ್ತಿದೆ.

ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತಿ ನಿವೇಶನ ಕಲ್ಪಿಸಿಕೊಟ್ಟಿದೆ. ಗ್ರಾ.ಪಂ.ಗೆ ಸೇರಿದ ಜಾಗದಲ್ಲಿ ಪೊಲೀಸರಿಗೆ ವಸತಿಗೃಹ ಸಹ ನಿರ್ಮಾಣ ಮಾಡಲಾಗಿದೆ.ಆದರೂ ಪೊಲೀಸ್ ಇಲಾಖೆ ಗ್ರಾ.ಪಂ.ಗೆ ಕಟ್ಟಡವನ್ನು ಕೊಡಲು ಮೀನಾಮೇಷ ಎಣಿ ಸುತ್ತಿರುವುದು ಏಕೆ? ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಗ್ರಾಮ ಪಂಚಾಯತಿಯ ಹಿಂದಿನ ಸಮಿತಿ ಗ್ರಂಥಾಲಯ ನಿರ್ಮಾಣಕ್ಕೆ ಕಟ್ಟಡವನ್ನು ನೀಡುವಂತೆ ಇಲಾಖೆಯ ಉನ್ನತ ಅಧಿಕಾರಿಗಳ ಮುಂದೆ ಪ್ರಸ್ತಾಪ ಮಾಡಿತ್ತು. ಅಧಿಕಾರಿವರ್ಗ ಗ್ರಾ.ಪಂ.ಗೆ ಕಟ್ಟಡವನ್ನು ನೀಡುವುದಕ್ಕೆ ಮನಸ್ಸು ಮಾಡಿಲ್ಲ.

ಗ್ರಂಥಾಲಯಕ್ಕೆ ಸೂಕ್ತ ಕಟ್ಟಡವಿಲ್ಲದೆ ಗ್ರಾ.ಪಂ. ವಾಣಿಜ್ಯ ಮಳಿಗೆ ಯಲ್ಲಿ ನಡೆಸಲಾಗುತ್ತಿದೆ. ಇಂದಿನ ಗ್ರಂಥಾಲಯದಲ್ಲಿ ಓದುಗರು ಕುಳಿತುಕೊಳ್ಳಲು ಪ್ರತ್ಯೇಕವಾದ ಕೊಠಡಿ ಇಲ್ಲ. ಇಬ್ಬರು ಕುಳಿತುಕೊಂಡರೆ ಹತ್ತಾರು ಜನರು ನಿಂತು ಓದುವಂತಾಗಿದೆ. ಪ್ರಾಥಮಿಕ ಹಂತದಿಂದ ಪದವಿ ವರೆಗೆ ವ್ಯಾಸಂಗ ಮಾಡಲು ಅವಕಾಶ ಇರುವ ಪ್ರವಾಸಿ ತಾಣವಾದ ಹಳೇಬೀಡಿಗೆ ಹೈಟೆಕ್ ಗ್ರಂಥಾಲಯ ಅಗತ್ಯವಿದೆ. ಗ್ರಂಥಾಲಯ ನಿರ್ಮಾಣಕ್ಕೆ ಇಲಾಖೆ ಕಟ್ಟಡವನ್ನು ನೀಡಿದರೆ ಪ್ರತಿನಿತ್ಯ ನೂರಾರು ಓದುಗರಿಗೆ ಅನುಕೂ ಲವಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ವಸತಿ ಪ್ರದೇಶದಲ್ಲಿಯೇ ಪೊಲೀಸ್ ಇಲಾಖೆಯ ಪಾಳುಕಟ್ಟಡ ಇರುವುದರಿಂದ ಜನರು ಭಯದಿಂದ ದಿನಕಳೆಯುವಂತಾಗಿದೆ. ಕಟ್ಟಡದಲ್ಲಿ ಸುರಕ್ಷತೆ ಇಲ್ಲದಿದ್ದರೂ ನೇಪಾಳಿ ಮೂಲದ ಗೂರ್ಖಾ ಕುಟುಂಬ ವಾಸವಾಗಿದೆ. ಮೇಲ್ಚಾವಣಿ ಹಾಗೂ ಗೋಡೆಗಳು ಜಖಂಗೊಂಡಿರುವುದರಿಂದ ಯಾವ ಸಮಯ ದಲ್ಲಾದರೂ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಕಟ್ಟಡದ ಸನಿಹದಲ್ಲಿ ಸುತ್ತಮುತ್ತಲಿನ ಮನೆಯ ಮಕ್ಕಳು ಓಡಾಡುತ್ತಾರೆ. ಕಟ್ಟಡಕ್ಕೆ ಮುಕ್ತಿ ದೊರಕದಿದ್ದರೆ ಭಾರಿ ಪ್ರಮಾಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.