ಅರಕಲಗೂಡು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು, ಕಳಕಳಿ ಶ್ಲಾಘನೀಯ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸಂತೋಷ್‌ಗೌಡ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರ ಜನಹಿತಕ್ಕಾಗಿ ರೂಪಿಸುವ ಹಲವಾರು ಯೋಜನೆಗಳು ವ್ಯವಸ್ಥೆಯ ಕಪಿಮುಷ್ಠಿಗೆ ಸಿಲುಕಿ ನಿಗದಿತ ಉದ್ದೇಶ ಈಡೇರದೆ ವಿಫಲವಾಗುತ್ತಿದೆ. ಆದರೆ ಈ ಸಂಸ್ಥೆ ರೂಪಿಸಿರುವ ಗ್ರಾಮಾಭಿವೃದ್ದಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿವೆ ಎಂದರು.
ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮಾತನಾಡಿ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ದೃಷ್ಠಿಯಿಂದ ಕಳೆದ 32 ವರ್ಷಗಳಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
17 ಜಿಲ್ಲೆಗಳಲ್ಲಿ ಹರಡಿದ್ದು ಹದಿನೆಂಟು ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಪರಿಹಾರ ರೂಪಿಸುವುದಲ್ಲದೆ ಆರೋಗ್ಯ,ಶಿಕ್ಷಣ, ಪರಿಸರ ನೈರ್ಮಲ್ಯ, ಕೃಷಿ, ಮಹಿಳೆಯರ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯ ರೂಪಿಸುತ್ತಿದೆ. ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಜನರ ಸಹಕಾರ ಅಗತ್ಯ ಎಂದರು.
ತಹಶೀಲ್ದಾರ್ ಜಗಧೀಶ್, ಪ.ಪಂ. ಉಪಾಧ್ಯಕ್ಷ ಅಬ್ದುಲ್ ಅಲೀಂಪಾಶ, ಉದ್ಯಮಿ ಮಹಾವೀರ್ ಜೈನ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ.ಪಿ.ಶಂಕರ್ ಮಾತನಾಡಿದರು. ಯೋಜನಾಧಿಕಾರಿ ಅಜಿತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.