ADVERTISEMENT

ಚೆಕ್‌ ಡ್ಯಾಂ ಅನುದಾನ ದುಂದು ವೆಚ್ಚ: ಆರೋಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 8:02 IST
Last Updated 24 ನವೆಂಬರ್ 2017, 8:02 IST

ಅರಕಲಗೂಡು: ನಿಗದಿತ ಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣವಾಗದ ಕಾರಣ ಅನುದಾನ ದುಂದು ವೆಚ್ಚವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಂ.ರವಿ ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ತಾಲ್ಲೂಕಿನ ಕೊರಟಿಕೆರೆ ಗ್ರಾಮದಲ್ಲಿ ₹ 5.10 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ಅನ್ನು ರಸ್ತೆ ಪಕ್ಕದ ಚರಂಡಿಯ ಬಳಿ ನಿರ್ಮಿಸಲಾಗುತ್ತಿದೆ. ಇದರಿಂದ ರೈತರಿಗಾಗಲಿ ಗ್ರಾಮಸ್ಥರಿಗಾಗಲಿ ಯಾವುದೇ ಉಪಯೋಗವಿಲ್ಲ.

ಗ್ರಾಮದ ಕೊಳಚೆ ನೀರು ಸಂಗ್ರಹವಾಗುವ ಕಾರಣ ಜನರು ರೋಗ ರುಜಿನಗಳಿಗೆ ಒಳಗಾಗುವ ಭೀತಿ ಇದೆ. ಇದನ್ನು ಕೋಟೆ ಕರ್ಪೂರವಳ್ಳಿ ಹಳ್ಳ ಇಲ್ಲವೆ ಕೊರಟಿಕೆರೆ ಕಾವಲು ಬಳಿ ನಿರ್ಮಿಸುವಂತೆ ಸೂಕ್ತ ಜಾಗವನ್ನು ಸಂಬಂಧಿಸಿದ ಎಂಜಿನಿಯರ್‌ಗೆ ತೋರಿಸಲಾಗಿತ್ತು. ಆದರೆ ಎಂಜಿನಿಯರ್ ತಮ್ಮ ಗಮನಕ್ಕೂ ತಾರದೇ ನಿರುಪಯುಕ್ತ ಸ್ಥಳದಲ್ಲಿ ಚೆಕ್ ಡ್ಯಾಂ ಕಟ್ಟಲು ಮುಂದಾಗಿದ್ದಾರೆ ಎಂದು ಗುರುವಾರ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಮಾಧ್ಯಮದವರೆದರು ಆರೋಪಿಸಿದರು.

ADVERTISEMENT

ಕೊರಟಿಕೆರೆ ಗ್ರಾಮದ ಬೆಳವಾಡಿ ರಸ್ತೆಗೆ ಹೊಂದಿಕೊಂಡಂತೆ ಚೆಕ್ ಡ್ಯಾಂ ಕಟ್ಟಲಾಗುತ್ತಿದ್ದು ಪಕ್ಕದಲ್ಲಿಯೇ ಕುಡಿಯುವ ನೀರಿನ ಮೋಟರ್ ಹಾಗೂ ವಿದ್ಯುತ್ ಕಂಬಗಳಿವೆ. ಇಲ್ಲಿ ನೀರು ಸಂಗ್ರಹವಾಗದ ಕಾರಣ ರೈತರ ಬಳಕೆಗೆ ಲಭ್ಯವಾಗುವುದಿಲ್ಲ. ಪಕ್ಕದ ರಸ್ತೆ ಕೂಡ ಹಾಳಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

3 ದಿನಗಳಿಂದ ನಡೆಯುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಪರಿಪೂರ್ಣವಾಗಿ ಸಾಗದೇ ಸರ್ಕಾರದ ಅನುದಾನ ಪೋಲಾಗುತ್ತಿದೆ. ಈ ಕುರಿತು ಜಿಪಂ ಸಿಇಒ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೂಡಲೇ ಅನಗತ್ಯ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಮೇಲಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು. ಸರ್ಕಾರದ ಅನುದಾನದ ದುರ್ಬಳಕೆ ತಡೆಯಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.