ADVERTISEMENT

ಜಾವಗಲ್‌: ಆಸ್ಪತ್ರೆಯಲ್ಲಿ ದಾಂಧಲೆ: ಮೂವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 6:43 IST
Last Updated 12 ಸೆಪ್ಟೆಂಬರ್ 2013, 6:43 IST

ಜಾವಗಲ್: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಕ್ಕಪ್ಪನ ಕೊಪ್ಪಲಿನ ಕೆಲವರು ನುಗ್ಗಿ ದಾಂಧಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ.

ಬಕ್ಕಪ್ಪನ ಕೊಪ್ಪಲು ಗ್ರಾಮದ ಈರಮ್ಮ ಎಂಬಾಕೆ ವಿಷ ಸೇವಿಸಿ ಅಸ್ವಸ್ಥರಾಗಿದ್ದು, ಅವರನ್ನು ಮತ್ತೊಂದು ಆಸ್ಪತ್ರೆಗೆ ಕರೆದು­ಕೊಂಡು ಹೋಗಲು ಅಂಬುಲೆನ್ಸ್ ವ್ಯವಸ್ಥೆ ಮಾಡು­ವಂತೆ ಕೆಲವರು ಕರ್ತವ್ಯದಲ್ಲಿದ್ದ ಆಯುಷ್ ವೈದ್ಯ ಡಾ. ಶರಣಪ್ಪ ಅವರನ್ನು ಒತ್ತಾಯಿಸಿದರು. ನಂತರ ಒಪಿಡಿ ಕೊಠಡಿಯಲ್ಲಿದ್ದ ಔಷಧಿಗಳನ್ನು ಎಸೆದು, ಮುಂಭಾಗದಲ್ಲಿ ಹೂವಿನ ಕುಂಡಗಳನ್ನು, ಕಿಟಕಿ ಗಾಜುಗಳನ್ನು ಒಡೆದು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಘಟನೆಯಿಂದ ಆಯುಷ್ ವೈದ್ಯ ಡಾ. ಶರಣಪ್ಪ ಗಾಬರಿಗೊಂಡರು. ಅವರು ವಿಷ ಸೇವಿಸಿದ ಮಹಿಳೆಯನ್ನು ತಪಾಸಣೆ ಮಾಡಲೂ ಅವಕಾಶ ನೀಡದೇ ಅವರ ಜತೆ ಬಂದಿದ್ದ ವ್ಯಕ್ತಿಗಳೇ ಮಹಿಳೆಯನ್ನು ಆಸ್ಪತ್ರೆಯಿಂದ ಖಾಸಗಿ ವಾಹನದಲ್ಲಿ ಬೇರೆ ಕಡೆಗೆ ಕರೆದುಕೊಂಡು ಹೋದರು ಎಂದು ತಿಳಿದು ಬಂದಿದೆ. ಪೊಲೀಸ್ ಇನ್‌ಸ್ಪೆಕ್ಟರ್  ಜೆ.ಇ. ಮಹೇಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ­ಯನ್ನು ತಿಳಿಗೊಳಿಸಿ­ದರು.

ಈ ಬಗ್ಗೆ ವೈದ್ಯರು ಜಾವಗಲ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿ ಸಿ­ಕೊಂಡು ಚಂದ್ರಣ್ಣ, ನವೀನ್ ಗೋವಿಂದ ಎಂಬುವರನ್ನು ವಶಕ್ಕೆ ತೆಗೆದು­ಕೊಂಡಿದ್ದಾರೆ.

ಬೂದೇಶ, ಸಿದ್ದೇಶ, ವಿಜಯ ಎಂಬವರು ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ. ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.