ADVERTISEMENT

ಡಿ.ಎಂ.ಕುರ್ಕೆ: ಅಭಿವೃದ್ಧಿ ದೂರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 6:21 IST
Last Updated 17 ಜುಲೈ 2013, 6:21 IST

ಅರಸೀಕೆರೆ: ತಾಲ್ಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಗ್ರಾಮ ಎಂದೇ ಹೆಸರು ಪಡೆದಿರುವ ದೊಡ್ಡಮೇಟಿಕುರ್ಕೆ (ಡಿ.ಎಂ. ಕುರ್ಕೆ) ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಈ ಗ್ರಾಮದಲ್ಲಿ ಸುಮಾರು 2,500 ಜನಸಂಖ್ಯೆ ಇದೆ. ಗ್ರಾಮದ ಬಹಳಷ್ಟು ಕೊಳವೆ ಬಾವಿಗಳು ಬತ್ತಿಹೋಗಿವೆ. ಹೀಗಾಗಿ ಇಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಗ್ರಾಮದಲ್ಲಿ ಬಸ್‌ನಿಲ್ದಾಣವಾಗಲಿ, ತಂಗುದಾಣ ವಾಗಲಿ ಇಲ್ಲ. ಹಿಂದೆ ಇಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿತ್ತು. ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ, ಬ್ಯಾಂಕ್ ಸೌಲಭ್ಯ, ಪಶು ಆಸ್ಪತ್ರೆ, ಸಾರ್ವಜನಿಕ ಗ್ರಂಥಾಲಯ, ಅಟಲ್‌ಜಿ ಜನಸ್ನೇಹ ಕೇಂದ್ರ, ಅಂಚೆ ಕಚೇರಿ ಮುಂತಾದವು ಹೆಸರಿಗೆ ಮಾತ್ರ ಇವೆ. ಇವುಗಳಿಂದ ಸಾರ್ವಜನಿಕರಿಗೆ ಸಮರ್ಪಕವಾದ ಸೌಲಭ್ಯ ದೊರೆಯುತ್ತಿಲ್ಲ.

ಗ್ರಾಮದ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಸುವರ್ಣ ಗ್ರಾಮೋದಯ ಯೋಜನೆ ಫಲಕಾರಿಯಾಗಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಗ್ರಾಮದ ಸ್ವಚ್ಛತೆಯನ್ನೇ ಮರೆತಂತಿದೆ. 20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ತ್ಯಾಜ್ಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.

ಜನಸಂಖ್ಯೆ ಬೆಳೆದಂತೆ ಹಾಗೂ ವ್ಯಾಪಾರ ವಹಿವಾಟು ಹೆಚ್ಚಿದಂತೆಲ್ಲ ಅಗತ್ಯ ಸೌಲಭ್ಯ ಕಲ್ಪಿಸುವುದು ಆಗತ್ಯವಾದರೂ ಗ್ರಾಮ ಪಂಚಾಯಿತಿ ಆ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಸಮರ್ಪಕವಾದ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇಲ್ಲ.

ಗ್ರಾಮ ಪಂಚಾಯಿತಿಗಳಿಗೆ ಈಗ ಹೆಚ್ಚು ಅಧಿಕಾರ ಹಾಗೂ ಅಧಿಕ ಅನುದಾನ ಹರಿದು ಬರುತ್ತಿದೆಯಾದರೂ ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಗ್ರಾಮ ತನ್ನ ನೈಜ ಸೌಂದರ್ಯ ಕಳೆದುಕೊಳ್ಳುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಾಡಾಳು ಶಿವಲಿಂಗಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.