ADVERTISEMENT

ಡೆಂಗೆ ಭೀತಿ: ಶುಚಿತ್ವ ಕಾಪಾಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 6:14 IST
Last Updated 13 ಜೂನ್ 2013, 6:14 IST

ಬೇಲೂರು: `ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸುವುದರ ಜತೆಗೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ತಹಶೀಲ್ದಾರ್ ರವಿಚಂದ್ರ ನಾಯಕ್ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಳ್ಳೆಗಳು ಕೇವಲ ಕೊಳಚೆ ಅಥವಾ ಕಲುಷಿತ ನೀರಿನಲ್ಲಿ ಉತ್ಪತ್ತಿಯಾಗುತ್ತಿಲ್ಲ. ನಿಂತ ಶುಚಿ ನೀರಿನಲ್ಲಿಯೂ ಉತ್ಪತ್ತಿಯಾಗುತ್ತಿವೆ. ಆದ್ದರಿಂದ ಜನರು ಮನೆಯ ಸುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.

ಡೆಂಗೆ, ಚಿಕುನ್ ಗುನ್ಯಾ, ಮಲೇರಿಯಾ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆ ನಿರ್ಧಾರ ಕೈಗೊಂಡಿತು. ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆ ಮತ್ತು ಹಳ್ಳಿಗಳಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಕರಪತ್ರ ಮುದ್ರಿಸಿ, ಮೈಕ್ ಮೂಲಕ ಅರಿವು ಮೂಡಿಸುವ ಕೆಲಸ ಮಾಡುವಂತೆ ತಹಶೀಲ್ದಾರ್ ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ರುದ್ರಯ್ಯ, ಕಾರ್ಯ ನಿರ್ವಹಣಾಧಿಕಾರಿ ಎನ್.ವಿ. ಶಿವಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂದ್ಯಾ ಇದ್ದರು.

ಅಸಮಾಧಾನ: ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಂ. ರವಿಕುಮಾರ್, ಪರ್ವತಯ್ಯ, ಪದ್ಮಾಕ್ಷಿ, ಮೋಹನ್ ಕುಮಾರ್ ಇತರ ಸದಸ್ಯರು `ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಡೆಂಗೆ ಕಾಣಿಸಿಕೊಂಡಿದ್ದು, ನಿಯಂತ್ರಿಸಲು ಕ್ರಮಕೈಗೊಂಡಿಲ್ಲ. ರೋಗ ಪೀಡಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲವೇ' ಎಂದು ಪ್ರಶ್ನಿಸಿದರು. ಇದಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಂಧ್ಯಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇವೆ. ಜನರು ಖಾಸಗಿ ಆಸ್ಪತ್ರೆಗೆ ತೆರಳಿದರೆ ತಾವೇನು ಮಾಡಲು ಸಾಧ್ಯ ಎಂದರು.

ತಹಶೀಲ್ದಾರ್ ರವಿಚಂದ್ರ ನಾಯಕ್ ಇದು ಅಧಿಕಾರಿ ಗಳ ಸಭೆ ಸದಸ್ಯರು ಈ ಕುರಿತು ಸಾಮಾನ್ಯ ಸಭೆಯಲ್ಲಿ ಮಾತ ನಾಡುವಂತೆ ತಿಳಿಸಿದರು. ಇದರಿಂದ ಆಕ್ರೋಶಗೊಂಡ ತಾಲ್ಲೂಕು ಪಂಚಾಯಿತಿ ಸದಸ್ಯರ ತಹಶೀಲ್ದಾರ್ ಉಡಾಫೆಯಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಸಭೆಯಿಂದ ಹೊರ ನಡೆದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ತಹಶೀಲ್ದಾರ್ `ತಾವು ಸದಸ್ಯರೊಂದಿಗೆ ಉಡಾಫೆಯಿಂದ ವರ್ತಿಸಿಲ್ಲ. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದ್ದ ಸಭೆಯಾ ಗಿದ್ದರಿಂದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಎಂದು ಹೇಳಿದೆ. ಸದಸ್ಯರನ್ನು ಸಭೆಯಿಂದ ಹೊರಹೋಗಿ ಎಂದೂ ತಾವು ಹೇಳಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.