ADVERTISEMENT

ತಾಕತ್ತಿದ್ದರೆ ಮಂಜೇಗೌಡ ವಿರುದ್ಧ ತನಿಖೆ ನಡೆಸಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಎಚ್‌.ಡಿ.ರೇವಣ್ಣ ಸವಾಲು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 10:30 IST
Last Updated 28 ಏಪ್ರಿಲ್ 2018, 10:30 IST

ಹಾಸನ : ಚುನಾವಣೆ ಸಮೀಪಿಸುತ್ತಿದ್ದಂತೆ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ವಾಕ್ಸಮರ ಮುಂದುವರೆದಿದೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಪಿ. ಮಂಜೇಗೌಡರ ಅಕ್ರಮ ಆಸ್ತಿ ಸಂಪಾದನೆ ವಿರುದ್ಧ ತನಿಖೆ ನಡೆಸಲಿ’ ಎಂದು ಶಾಸಕ ಎಚ್.ಡಿ. ರೇವಣ್ಣ ಸವಾಲು ಹಾಕಿದರು.

‘ಕಳ್ಳರು, ಲೂಟಿ ಕೋರರಿಂದ ಪಾಠ ಕಲಿಯುವ ಅಗತ್ಯ ಇಲ್ಲ. ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಿದರೂ ಭಯವಿಲ್ಲ. ಮಂಜೇಗೌಡ ಆದಾಯಕ್ಕಿಂತ ಶೇಕಡಾ 435 ರಷ್ಟು ಅಧಿಕ ಆಸ್ತಿ ಹೊಂದಿದ್ದಾರೆ. ಚಾರ್ಜ್‌ಶೀಟ್‌ ಹಾಕಿ ಎಂಟು ವರ್ಷ ಕಳೆದರೂ ತನಿಖೆ ನಡೆಸಲಿಲ್ಲ.

ADVERTISEMENT

ಸರ್ಕಾರಿ ನೌಕರಿಯಲ್ಲಿದ್ದಾಗ ಅವರ ವಿರುದ್ಧ ಹಲವು ಆರೋಪಗಳಿದ್ದರೂ ರಾಜೀನಾಮೆ ಏಕೆ ಅಂಗೀಕರಿಸಿದರು ಎಂಬುದನ್ನು ಬಹಿರಂಗಪಡಿಸಲಿ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಆಸ್ತಿಗಾಗಿ ಮಂಜೇಗೌಡ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಹಣ ಹಂಚಿಕೊಳ್ಳುವ ವಿಚಾರದಲ್ಲಿ ನಡೆದ ಜಗಳದಲ್ಲಿ ಅವರ ಮೇಲೆ ಆಸಿಡ್‌ ಹಾಕಲಾಯಿತು. ಆಗ ರಕ್ಷಿಸುವಂತೆ ನನ್ನ ಮನೆ ಬಾಗಿಲಿಗೆ ಬಂದಿದ್ದರು. ನನ್ನ ಆಸ್ತಿ ಬಗ್ಗೆ ಅನುಮಾನ ಇದ್ದರೆ ತನಿಖೆ ನಡೆಸಿ ಮುಟ್ಟುಗೋಲು ಹಾಕಿಸಲಿ. ಕಾಂಗ್ರೆಸ್‌ಗೆ ಅಭ್ಯರ್ಥಿ ಇಲ್ಲದೆ ಭ್ರಷ್ಟನನ್ನು ಕರೆತಂದು ನಿಲ್ಲಿಸಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಹೊಳೆನರಸೀಪುರ ಜನರಿಗೆ ಸ್ವಾತಂತ್ರ್ಯ ಇಲ್ಲ ಎನ್ನುವುದಾದರೆ ಮುಖ್ಯಮಂತ್ರಿಗೆ ಹೇಳಿ ಸ್ವಾತಂತ್ರ್ಯ ಕೊಡಿಸಲಿ. ಚುನಾವಣಾ ಆಯೋಗಕ್ಕೆ ಮಂಜೇಗೌಡರ ವಿರುದ್ಧ ಯಾವುದೇ ದೂರು ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನನ್ನ ಮಗ ಪ್ರಜ್ವಲ್ ಮಚ್ಚು, ಲಾಂಗು ಹಿಡಿದು ಓಡಾಡುವ ಸಂಸ್ಕೃತಿಯಲ್ಲಿ ಬೆಳೆದಿಲ್ಲ. ಅವನು ಕಾಂಗ್ರೆಸ್‌ ಅಭ್ಯರ್ಥಿ ಮನೆ ಬಳಿ ಏಕೆ ಹೋಗುತ್ತಾನೆ? ಅದಕ್ಕೆ ಏನಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸುಳ್ಳು ಆರೋಪ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

‘ಜಿಲ್ಲೆಯಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುತ್ತದೆ ಎಂಬ ಬಗ್ಗೆ ಅನುಮಾನವಿದೆ. ಹಾಲಿನ ವಾಹನದಲ್ಲಿ ಹಣ, ಮದ್ಯ ಸಾಗಾಟ ಮಾಡುತ್ತಿದ್ದರೆ ತಪಾಸಣೆ ನಡೆಸಲಿ. ಕ್ಷೇತ್ರದಲ್ಲಿ ಬಹಿರಂಗವಾಗಿಯೇ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಸಾಕ್ಷಿ ಸಮೇತ ಬಂಧಿಸಲಾಗಿದೆ. ಆದರೆ, ವಾಹನವನ್ನು ವಶಕ್ಕೆ ಪಡೆದಿಲ್ಲ.’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.