ADVERTISEMENT

ತಾಯಿ, ಶಿಶು ಮರಣ ಪ್ರಮಾಣ ತಡೆಯಿರಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಸಿ.ಜಾಫರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 11:20 IST
Last Updated 19 ಮೇ 2018, 11:20 IST

ಹಾಸನ: ‘ಹೆರಿಗೆ ಸಮಯಕ್ಕೂ ಮುಂಚಿತವಾಗಿ ಗರ್ಭಿಣಿಯರಿಗೆ ಆಶಾ ಕಾರ್ಯಕರ್ತೆಯರು ಆಸ್ಪತ್ರೆಯಲ್ಲಿನ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಅವಶ್ಯಕ ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ನೀಡುವ ಮೂಲಕ ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಡೆಯುವಂತೆ’ ಜಿಲ್ಲಾಧಿಕಾರಿ ಪಿ.ಸಿ ಜಾಫರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಆರೋಗ್ಯ ಸಂಘಗಳ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಗರ್ಭಿಣಿ ತಾಯಂದಿರ ಅಥವಾ ಮಗುವಿನ ಮರಣ ಪ್ರಮಾಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶೇ 100ರಷ್ಟು ಹೆರಿಗೆಗಳನ್ನು ಆಸ್ಪತ್ರೆಗಳಲ್ಲಿಯೇ ಮಾಡಿಸಬೇಕು. ಆಶಾ ಕಾರ್ಯಕರ್ತೆಯರು ಗರ್ಭಿಣಿ ತಾಯಂದಿಯರಿಗೆ ಬರುವಂತಹ ಕಾಯಿಲೆಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡಬೇಕು. ತಡ ಮಾಡದೆ ಉತ್ತಮ ಚಿಕಿತ್ಸೆ ಪಡೆಯುವುದರೊಂದಿಗೆ ಎಚ್ಚರಿಕೆಯಿಂದ ಇರುವಂತೆ ಮನವರಿಕೆ ಮಾಡಿಕೊಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಸಾಮಾನ್ಯವಾಗಿ ಹಳ್ಳಿಯ ಜನರಿಗೆ ಚಿಕಿತ್ಸೆ ಪಡೆಯುವಂತೆ ಒಮ್ಮೆ ಹೇಳಿದರೆ ಮನದಟ್ಟಾಗುವುದಿಲ್ಲ. ಯಾವ ಕಾಯಿಲೆ ಬಂದಿದೆ ಮತ್ತು ಅದರಿಂದ ಯಾವ ಪರಿಣಾಮ ಬೀರಲಿದೆ ಎಂಬುದನ್ನು ವಿವರಿಸಿದರೆ ಜಾಗೃತಿ ಉಂಟಾಗುತ್ತದೆ. ಆದ್ದರಿಂದ ಅಂಗನವಾಡಿ ಕೇಂದ್ರಗಳ ಆಯಾ ವ್ಯಾಪ್ತಿಯ ಗರ್ಭಿಣಿಯರು ಹಾಗೂ ಅವರ ಮನೆಯಲ್ಲಿನ ಯಜಮಾನರೊಂದಿಗೆ ಕೌನ್ಸೆಲಿಂಗ್‌ ಕಾರ್ಯವನ್ನು ಏರ್ಪಡಿಸಬೇಕು ಎಂದು ಜಾಫರ್‌ ಸಲಹೆ ನೀಡಿದರು.

ADVERTISEMENT

ಇದೇ ವೇಳೆ ಇಂದ್ರಧನುಷ್ ಕಾರ್ಯಕ್ರಮದ ಬೆಳವಣಿಗೆ ಕುರಿತು ಮಾಹಿತಿ ಪಡೆದರು. ಇಂದ್ರಧನುಷ್ ಯೋಜನೆಯಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಕಾರ್ಯವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಿಗರಿಗೆ ವಹಿಸಲಾಗಿದೆ. ಇದು ಪ್ರತಿ ತಿಂಗಳು ನಡೆಯುತ್ತಿದ್ದು, ಮೇ ತಿಂಗಳಿನಲ್ಲಿ 23, 25, 26ರಂದು ನಡೆಸಲಾಗುತ್ತದೆ ಎಂದು ವಿವರಿಸಿದರು.

ಶಾಲೆಗಳ ವ್ಯಾಪ್ತಿಯಲ್ಲಿ ಮಕ್ಕಳನ್ನು ಪರೀಕ್ಷಿಸಿ ಅವರಿಗೆ ಅನಾರೋಗ್ಯ ಕಂಡು ಬಂದಲ್ಲಿ ಅವರ ಪೂರ್ತಿ ವಿಳಾಸದೊಂದಿಗೆ ಹೆಸರನ್ನು ಕಂಪ್ಯೂಟರ್‌ನಲ್ಲಿ ದಾಖಲಾತಿ ಮಾಡಬೇಕು. ಚಿಕಿತ್ಸೆ ಪಡೆಯಲು ವೈದ್ಯಾಧಿಕಾರಿಗಳ ಲಭ್ಯತೆ ಸಮಯಕ್ಕೂ 2-3 ದಿನ ಮುಂಚಿತವಾಗಿ ಸಂಬಂಧಪಟ್ಟ ಮಗುವಿನ ತಂದೆ, ತಾಯಿ ಅಥವಾ ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತಂದು ಚಿಕಿತ್ಸೆ ಪಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಡಿ.ಸಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಶಾಲಾ, ಕಾಲೇಜುಗಳಿಗೆ 2 ತಿಂಗಳು ರಜೆ ಇದ್ದ ಕಾರಣ ಕುಡಿಯುವ ನೀರಿನ ತೊಟ್ಟಿಗಳು ಕಲುಷಿತಗೊಂಡಿವೆ. ಆದ್ದರಿಂದ ಅವುಗಳನ್ನು ಶುಚಿಗೊಳಿಸಿ ಅವಶ್ಯಕ ಒ.ಆರ್.ಎಸ್ ಸೌಲಭ್ಯ ನೀಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಆರ್ ವೆಂಕಟೇಶ್, ಆರ್.ಸಿ.ಎಚ್ ಅಧಿಕಾರಿ ಡಾ. ಜನಾರ್ದನ್, ಜಿಲ್ಲಾ ಶಸ್ತ್ರಚಿಕಿತ್ಸಕ ಶಂಕರ್ ಎಂ, ಎಲ್ಲಾ ತಾಲ್ಲೂಕು ಮಟ್ಟದ ವೈದ್ಯಾಧಿಕಾರಿಗಳು, ಅಧಿಕಾರಿಗಳು ಹಾಜರಿದ್ದರು.

ಈ ವರ್ಷ 501 ಮಂದಿಗೆ ಎಚ್ಐವಿ ಪತ್ತೆ

ಜಿಲ್ಲೆಯಲ್ಲಿ ಈವರೆಗೂ 1,28,867 ಎಚ್ಐವಿ ಪರೀಕ್ಷೆ ಮಾಡಲಾಗಿದೆ. ಈ ವರ್ಷ ಪರೀಕ್ಷೆ ನಡೆಸಿದ 71,811 ಜನರ ಪೈಕಿ 501 ಮಂದಿಗೆ ಎಚ್ಐವಿ ಸೋಂಕು ಪತ್ತೆಯಾಗಿದೆ. ಗರ್ಭಿಣಿಯರಿಗೆ ಕಡ್ಡಾಯವಾಗಿ ಎಚ್ಐವಿ ಹಾಗೂ ಟಿ.ಬಿ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.

ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಿ

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಅವಶ್ಯಕ ವೈದ್ಯಾಧಿಕಾರಿಗಳು ಇಲ್ಲದಿರುವುದರಿಂದ ಅಗತ್ಯವಿರುವ ವೈದ್ಯರನ್ನು ನೇಮಿಸಿಕೊಳ್ಳಲು ನಿಯಮಾನುಸಾರ ಅರ್ಜಿ ಆಹ್ವಾನಿಸಬೇಕು. ಜಿಲ್ಲೆಯ ಎಲ್ಲಾ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ವರದಿ ತಯಾರಿಸಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.